ಶುಕ್ರವಾರ, ಮೇ 1, 2026

​"ಚಿಗುರೆಲೆ ಸೀಮೆ-ಮೈಸೂರಿನ ಅಸಲಿ ವಾರಸುದಾರರು ಯಾರು?! ಮರೆತುಹೋದ 'ತೊರೆಯರ' ಚರಿತ್ರೆ"

ಸಾಂಸ್ಕೃತಿಕ ಸಿರಿವಂತಿಕೆಯ ಮೈಸೂರು ಸೀಮೆಯ ಮೂಲನಿವಾಸಿ ಮಣ್ಣಿನ ಮಕ್ಕಳು ಯಾರು? ಹೀಗೊಂದು ಪ್ರಶ್ನೆ ಬಹಳಷ್ಟು ಜನರನ್ನು ಕಾಡದೇ ಇರದು. ಮೈಸೂರು ಸೀಮೆ ಎಂದಾಕ್ಷಣ ಹಳೆ ಮೈಸೂರು ಪ್ರಾಂತ್ಯವಲ್ಲ. ಇನ್ನೂ ಸೂಕ್ಷ್ಮವಾಗಿ ಗುರುತಿಸುವುದಾದರೆ ಕಾವೇರಿ ನದಿಯ ದಕ್ಷಿಣಕ್ಕೆ ಅದರ ಉಪನದಿಗಳಾದ ಲಕ್ಣ್ಮಣತೀರ್ಥ, ಹೇಮಾವತಿ, ಗುಂಡ್ಲ, ಕಪಿನಿ, ಎಣ್ಣೆಹೊಳೆ ಹಾಗೂ ಹೊನ್ನುಹೊಳೆ ಮೊದಲಾದ ಮಲೆನಾಡಿನಿಂದ ಇಳಿದುಬಂದು ನೆಲವನ್ನು ತೋಯ್ದು ಸಮೃದ್ಧಗೊಂಡಿರುವ 'ಚಿಗುರೆಲೆ' ನಾಡನ್ನು ಮೈಸೂರಿನ ತಿರುಳೆಂದು ಗುರುತಿಸಬಹುದು. 


ಈ ನಾಡನ್ನು ಪ್ರಾಚೀನ ಶಾಸನಗಳು “ಶ್ರೀಮದ್ ಕುಮಾರನಾಡಾದ-ತೊರೆನಾಡು" ಎಂದೇ ಗುರುತಿಸಿವೆ. ನೀವು ಮೈಸೂರು ಅರಸರ ಚರಿತ್ರೆಯನ್ನೊಮ್ಮೆ ಗಮನಿಸಿ. ಅವರು ಈ ಕಾವೇರಿ ಗಡಿಯನ್ನು ದಾಟಿಕೊಂಡು ಹೋಗಿದ್ದು ತೀರಾ ತಡವಾಗಿ. ಅಂದರೆ ಅವರ ರಕ್ತ ಸಂಬಂಧ, ಸಾಂಸ್ಕೃತಿಕ ಸಂಬಂಧಗಳನ್ನು ಬೆಸೆದ ಮೂಲ-ಬೇರುಗಳು ಅಂದು-ಇಂದು ಹರಡಿಕೊಂಡಿರುವುದು ಈ "ತಿರುಳು" ಸೀಮೆಯಲ್ಲಿಯೇ.


ಈ ತೊರೆನಾಡಿನ ಮೂಲನಿವಾಸಿಗಳನ್ನು ತೊರೆಯರೆಂಬುದಾಗಿ ಕರೆಯಲಾಗುತ್ತದೆ. ಜಾನಪದೀಯವಾಗಿ ಇವರನ್ನು “ಚಿಗುರೆಲೆ-ದೊರೆ ಮಕ್ಕಳು" ಎಂತಲೂ ಕರೆಯಲಾಗುತ್ತದೆ. ಮೈಸೂರು "ಚಿಗುರೆಲೆ ಸೀಮೆ" ಎಂದೇ ಜಗತ್ಪ್ರಸಿದ್ಧಿಯಾಗಿರುವುದು ನಮಗೆಲ್ಲಾ ತಿಳಿದಿರುವಂತದ್ದೆ. ಚಿಗುರೆಲೆ-ದೊರೆಗಳೆಂದರೆ ಮೈಸೂರಿನ ಒಡೆಯರು, ಒಡೆಯರ ಪೂರ್ವಜರಾದ ಹೊಯ್ಸಳರು, ಹೊಯ್ಸಳರ ಪೂರ್ವಜರಾದ ಗಂಗರು! ಇವರುಗಳ ಬಗ್ಗೆಯೂ ನಮಗೆಲ್ಲಾ ಪರಿಚಯ ಇರುವಂತದ್ದೆ. ಆದರೆ ಈ ಮಣ್ಣನ್ನು ಜೀರ್ಣಸಿ ಇಲ್ಲಿನ ಸೊಗಡನ್ನು ಉಸಿರಾಡಿದ ಸಾಮಾನ್ಯ ಮೂಲನಿವಾಸಿ ಜನರ ಕುರಿತಾಗಿ ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ; ಅಲ್ಪಪ್ರಮಾಣದಲ್ಲಿ ತಿಳಿದಿದ್ದರೂ misconceptions  ಹೆಚ್ಚಾಗಿದೆ.


ಈ ಮೂಲನಿವಾಸಿಗಳ ಕುರಿತಾಗಿ ಫ್ರಾನ್ಸಿಸ್ ಬುಕಾನಾನ್ (1762-1829) ತನ್ನ “A Journey from Madras through the Countries of Mysore, Canara and Malabar,1807” ಎಂಬ ಕೃತಿಯಲ್ಲಿ “ತೊರೆಯರೆಂಬುವವರು ಮೈಸೂರಿನ ದಕ್ಷಿಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಅವರು ಕರ್ನಾಟಕ ದೇಶದ ಮೂಲನಿವಾಸಿಗಳಾಗಿದ್ದಾರೆ” ಎಂದು ದಾಖಲಿಸಿರುತ್ತಾನೆ. 'ಕರ್ನಾಟಕದ ಮೂಲನಿವಾಸಿಗಳು' ಎಂದಿರುವುದನ್ನು ಮತ್ತೊಮ್ಮೆ ಓದಿ!


ಈ ತೊರೆಯರ ಕುರಿತಾಗಿ ನಮಗೆ ಸಾಕಷ್ಟು ಶಾಸನ ಮತ್ತು ಸಾಹಿತ್ಯಾಧಾರಗಳು ಲಭ್ಯ ಇವೆ. ಆದರೆ ಮೈಸೂರು ಒಡೆಯರ್ ಪ್ರಭುತ್ವದ ನೆರಳಿನಲ್ಲಿ ರಚನೆಗೊಂಡ ಆಕರಗಳಲ್ಲಿ ಮೂಲನಿವಾಸಿ-ತೊರೆಯರನ್ನು ಬೇಕಂತಲೇ ತುಚ್ಛೀಕರಿಸಿರುವುದು ಹಾಗೂ ಕಡೆಗಣಿಸಿರುವುದು ಹೆಜ್ಜೆಹೆಜ್ಜೆಗೂ ಸ್ಪಷ್ಟಗೊಳ್ಳುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸದೆ, ಯಥಾವತ್ತಾಗಿ ಪರಿಗಣಿಸಲಾಗುವುದಿಲ್ಲ. ಆದರೆ ವಸಾಹತು-ಕಾಲದ ಹಯವದನರಾವ್ ರಿಂದ ಪ್ರಾರಂಭಗೊಂಡು ಈಗಿನ ಪ್ರೊ.ನಂಜರಾಜೇ ಅರಸು ರವರೆಗೂ ತೊರೆಯರ ಚರಿತ್ರೆಯನ್ನು ಪೂರ್ವಾಗ್ರಹ ಹಿನ್ನೆಲೆಯಲ್ಲಿ ತುಚ್ಛೀಕರಿಸಿರುತ್ತಾರೆ.


ತೊರೆಯರೆಂಬುದು ಮೈಸೂರು ದೇಶದ ಒಂದು ವೈವಿಧ್ಯಮಯ ಬುಡಕಟ್ಟಾಗಿದ್ದು, ಇವರಲ್ಲಿ ಸ್ಥೂಲವಾಗಿ 'ಗೌರಿಕುಲ' ಹಾಗೂ 'ಗಂಗಾಕುಲ' ಎಂಬ  ಎರಡು endogamous ಉಪಪಂಗಡಗಳನ್ನು ಗುರುತಿಸಬಹುದಾಗಿದೆ. ಈ ಈರ್ವರು ಅಣ್ಣತಮ್ಮಂದಿರೆಂದು, ಸಾಂಪ್ರದಾಯಿಕವಾಗಿ ವೈವಾಹಿಕ ಕೊಡುಕೊಳ್ಳುವಿಕೆಗಳು ನಡೆದು ಬಂದಿರುವುದಿಲ್ಲ. ಆದರೆ ಗಡಿಮನೆ-ಕಟ್ಟೆಮನೆಗಳನ್ನು ಹಂಚಿಕೊಂಡಿದ್ದಾರೆ.


ಗೌರಿಕುಲದವರು ತಾವು ಗೌರಿ ಅಥವಾ ಪಾರ್ವತಿಯ ಮಕ್ಕಳೆಂದು, ಹನ್ನೆರಡು ಬಣ್ಣದವರೆಂದು ಕರೆದುಕೊಳ್ಳುತ್ತಾರೆ. ಇವರನ್ನು "ಪಾಳೇಗಾರರು" ಮತ್ತು "ರಾಜಪರಿವಾರದವರು" ಎಂತಲೂ ಕರೆಯಲಾಗುತ್ತದೆ. ಇವರು ಬಿಡುವಿನಲ್ಲಿ ಬಲೆ ಬೀಸಿ ತಮ್ಮ ಸುತ್ತಮುತ್ತಲ ಕುರುಚಲು ಕಾಡುಗಳಲ್ಲಿ, ತೋಟತುಡಿಕೆಗಳಲ್ಲಿ ಬೇಟೆಯನ್ನಾಡುವ "ಬೇಡ" ರಿದ್ದಾರೆ. ಜೊತೆಗೆ ಜೀವನೋಪಾಯಕ್ಕಾಗಿ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ವೀರನಗೆರೆ ಬದನೆ, ಹೊಗೆಸೊಪ್ಪು ಇವೇ ಮೊದಲಾದ ತೋಟಗಾರಿಕಾ ಕೃಷಿಯನ್ನು ಅವಲಂಬಿಸಿದ "ಒಕ್ಕಲಿಗರು" ಆಗಿದ್ದಾರೆ. 

ಹಾಗಂತ ಕಾವೇರಿ-ಎಡದಂಡೆಯ ಒಕ್ಕಲಿಗರಷ್ಟು sophisticated-ಕೃಷಿಕರು ಇವರುಗಳಾಗಿರಲಿಲ್ಲ. 


ತೊರೆಯರು ನೇಗಿಲು ಬಳಸುವುದು ಕಡಿಮೆ ಅಥವಾ ಅದರ ಬಳಕೆಗೆ ವಿಶೇಷ ಆಸಕ್ತಿ ಹೊಂದಿರಲಿಲ್ಲ ಎಂದೇ ಹೇಳಬಹುದು. ಅದಕ್ಕೆ ಇವರುಗಳ ಸಾಂಸ್ಕೃತಿಕ-ಕಾರಣ ಏನೇ ಇದ್ದರೂ, ನನಗನಿಸಿದ್ದು ಈ ತೋಟಗಾರಿಕೆ ಮಾಡುತ್ತಿದ್ದವರು ವಿಶೇಷವಾಗಿ ತೊರೆಯ-ಹೆಣ್ಣುಮಕ್ಕಳಿದ್ದರಿಂದ ನೇಗಿಲ ಬಳಕೆ ಕಡಿಮೆಯೆಂದು ಹೇಳಬಹುದು. ನೀರಿನ ಸೆಲೆಯಾಶ್ರಯಿಸಿದ ನೆಲ ನೋಡಿ ಕೈಯ್ಯಲ್ಲಿ ಕುಂಟೆ-ಹೊಡೆದು ತೋಟ ಮಾಡುವರು. ಇನ್ನೂ ಗಂಡುಗಳು ದಂಡಿನ ಊಳಿಗದಲ್ಲಿದ್ದದ್ದೆ ಹೆಚ್ಚು. ಹೊಯ್ಸಳರ ಗರುಡ-ಪಡೆಯು ತೊರೆಯರಿಂದಲೇ ಕೂಡಿದ್ದಾಗಿತ್ತು. ಅದರ ಪಳೆಯುಳಿಕೆಯನ್ನು ಇಂದಿಗೂ ತೊರೆಯರಲ್ಲಿ ಮಾತ್ರ ಗುರುತಿಸಲು ಸಾಧ್ಯವಿದೆ. 


ಈ ಗೌರಿಕುಲ-ತೊರೆಯರ ಉಪನಾಮವು ಸಾಮಾನ್ಯವಾಗಿ "ನಾಯಕ" ಎಂದಾಗಿರುತ್ತದೆ. ಕೆಲವು ಕುಟುಂಬಗಳಲ್ಲಿ 'ಶೆಟ್ಟಿ', 'ಗೌಡ', 'ಅರಸ', 'ರಾಜ' ಎಂಬ ಉಪನಾಮಗಳನ್ನು ಹೊಂದಿರುವುದನ್ನು ಕಾಣಬಹುದು. ಮುಂದುವರೆದು ಇವರು ತಾವು ಸೂರ್ಯವಂಶಿ-ಇಕ್ಷ್ವಾಕು ಕುಲದವರೆಂದು, ಅಯೋಧ್ಯ ಶ್ರೀರಾಮ ತಮ್ಮ ಸಾಂಸ್ಕೃತಿಕ ನಾಯಕನೆಂದು, ಸೂರ್ಯನಾರಾಯಣ ಅಥವಾ ಬಿಳಿಗಿರಿ ರಂಗನಾಥನು ತಮ್ಮ ಕುಲದೇವರೆಂದು ಆರಾಧಿಸುವುದಿದೆ. ಸಂಕ್ರಾಂತಿಯಂದು ಈ ದೇವರುಗಳ ಉತ್ಸವಮೂರ್ತಿಗಳೊಂದಿಗೆ ಕಾಡಿಗೆ ಬೇಟೆಗೆ ಹೋಗುತ್ತಾರೆ. ಇವರನ್ನು ವಿಶೇಷವಾಗಿ ಕಾವೇರಿಯ ಉಪನದಿಗಳಾದ ಕಪಿಲಾ, ಗುಂಡಲ (ಕೌಂಡಿನ್ಯ), ಹೊನ್ನುಹೊಳೆ (ಸುವರ್ಣಾವತಿ), ಲಕ್ಷ್ಮಣತೀರ್ಥ, ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಗುರುತಿಸಬಹುದಾಗಿದೆ. 


ಇವರಿರುವೆಡೆಗಳಲ್ಲಿ ರಾಶಿ ರಾಶಿ ವೀರಗಲ್ಲುಗಳನ್ನು, ವೀರರ ಆರಾಧನೆಯನ್ನು ಕಾಣಬಹುದಾಗಿದೆ. ಇವುಗಳು ಇವರ ಪರಂಪರೆ-ಸಂಸ್ಕೃತಿಯ ಧ್ಯೋತಕವಾಗಿವೆ. ಯುದ್ಧದೇವತೆಗಳೆನಿಸಿದ ಚಾಮುಂಡಿ, ಉರಿಕಾತಿ, ಉರಿಮಸಣಿ ಮೊದಲಾದ ಮಾರಿ-ಮಸಣಿಯರ ಸಾಂಪ್ರದಾಯಿಕ ಅರ್ಚಕರು ಹಾಗೂ ಅವುಗಳಿಗೆ ಬಲಿ ಕೊಡುವ ಅಥವಾ ಬಲಿ ಬೀಳುವ ಜನರು ಇವರೇ ಆಗಿದ್ದಾರೆ. ಯುದ್ಧ-ಪ್ರಚೋದಕ ಅಥವಾ ರಣೋತ್ಸಾಹ ಹಿನ್ನೆಲೆಯ ಮಾರಿಕುಣಿತ, ವೀರಮಕ್ಕಳ ಕುಣಿತದ ಜೊತೆಗೆ ಕತ್ತಿವರಸೆ ಹಾಗೂ ದೊಣ್ಣೆ ವರಸೆಗಳಲ್ಲಿ ಅತ್ಯಂತ ನಿಷ್ಣಾತರಿದ್ದಾರೆ.


ಜೊತೆಗೆ ಇವರಲ್ಲಿನ ಕೆಲ ಗಂಡಸರು ದೇವಾಲಯಗಳಲ್ಲಿ ಸಾಂಪ್ರಾದಾಯಿಕ ನಾದಸ್ವರ ವಾದಕರಾಗಿ, ಹೆಂಗಸರು ನೃತ್ಯಗಾರರಾಗಿ ಸೇವೆ ಸಲ್ಲಿಕೊಂಡು ಬಂದಿರುವುದು ಗಮನಾರ್ಹ. ಈ ನಾದಸ್ವರ ನುಡಿಸುವ ಗಂಡಸರೇ ರಾತ್ರಿ ಹೊತ್ತು ಕತ್ತಿ ಹಿಡಿದು ದೇವಾಲಯವನ್ನು ಕಾಯುವ 'ತಳವಾರ' ರಿದ್ದಾರೆ. ಇಂತಹ ಕುಟುಂಬಗಳನ್ನು ಚಾಮುಂಡಿಬೆಟ್ಟ, ಬಿಳಿಗಿರಿರಂಗನಬೆಟ್ಟ ಮೊದಲಾದೆಡೆಗಳಲ್ಲಿ ಗುರುತಿಸಬಹುದಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಬಹುತೇಕ ಆಚರಣೆ-ಕೆಲಸಗಳಲ್ಲಿ ಇವರ ಪಾಲ್ಗೊಳ್ಳುವಿಕೆ ಖಡ್ಡಾಯವಾಗಿ ಇರುತ್ತದೆ.


ತೊರೆಯರ ಮತ್ತೊಂದು ವರ್ಗವಾದ ಗಂಗಾಕುಲದವರು ಕಾವೇರಿಯ ದಂಡೆಯಲ್ಲಿ ದಟ್ಟವಾಗಿ ಕಂಡುಬರುತ್ತಾರೆ. ಇವರು ತಮ್ಮನ್ನು ಪ್ರಾಚೀನ (ತಲಕಾಡಯ) ಗಂಗವಂಶದ ಸಂತತಿಯವರೆಂದು, ತಮಗೆ ಭೀಷ್ಮನಿಂದ "ಗಾಂಗೇಯ" ಅಥವಾ "ಗಂಗಾನ್ವಯ" ಎಂಬ ಹೆಸರು ಬಂತೆಂದು, ಇನ್ನೂ ಕೆಲವರು ಜಲಪ್ರಳಯದ ನಂತರ ಮನುವು ಮೀನನ್ನು ಮದುವೆಯಾಗಿ ತಮ್ಮ ಸಂತತಿ  ಹುಟ್ಟಿದರಿಂದ ತಮಗೆ ಆ ಹೆಸರು ಬಂತೆಂದು ನಂಬುತ್ತಾರೆ. ಇವರು ನೀರಿನ ಬೇಟೆಯಲ್ಲಿ ನಿಷ್ಣಾತರಿದ್ದಾರೆ. ಹಾಗೂ ಪ್ರಾಚೀನ ದಂಡುಗಳಲ್ಲಿ ಯೋಧರಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ಕಾರ್ಯಗಳಾದ ಪಲ್ಲಕ್ಕಿ ಹೊರುವುದು, ಓಲೆಕಾರಿಕೆ, ತಳವಾರಿಕೆ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. 


ಇವರ ಉಪನಾಮವು "ಬೋಯಾ/ಬೋವ/ಬೋಯಿ" ಎಂದಿರುತ್ತದೆ. ಇವರನ್ನು ಗಂಗಾಕುಲದವರೆಂದು ಕರೆದಂತೆ, ಇವರ ರಾಜರನ್ನು ಗಂಗರಸರೆಂದು, ಇವರ ನಾಡನ್ನು ಗಂಗವಾಡಿಯೆಂದು ಕರೆದಂತೆ ತೋರುತ್ತದೆ. ಈ ಗಂಗಾಕುಲ ಬುಡಕಟ್ಟಿನ ಕುರಿತಾಗಿ ಸ್ವತಂತ್ರ ಉಲ್ಲೇಖಗಳು ಪ್ರಾಚೀನ ಶಾಸನಗಳಲ್ಲಿರುವ ಬಗ್ಗೆ ದಿವಂಗತ ಪ್ರೊ. ಎಂ.ಎಂ.ಕಲಬುರ್ಗಿಯವರು ಬರೆದಿದ್ದಾರೆ. 


ಇಷ್ಟೆಲ್ಲಾ ವೈವಿಧ್ಯಮಯ ಕಸುಬುಗಳಲ್ಲಿ  ತೊಡಗಿಸಿಕೊಂಡಿದ್ದ ಮೂಲನಿವಾಸಿ "ಬುಡಕಟ್ಟು" ಒಂದನ್ನು ಕೇವಲ 'ಬೇಟೆಗಾರರು', 'ಮೀನುಗಾರರು', 'ಸೇವಕ-ವರ್ಗ' ಅಥವಾ 'ಕೆಳಜಾತಿ-ಶೂದ್ರರು' ಎಂದು ಮುಂತಾದಂತೆ ಹಣೆಪಟ್ಟಿಗಳನ್ನು ಮೈಸೂರು ಒಡೆಯರ ಪ್ರಭುತ್ವದಡಿ ಕಾರ್ಯನಿರ್ವಹಿಸುತ್ತಿದ್ದ ತಮಿಳು-ಅಧಿಕಾರಶಾಹಿಯು ಕಟ್ಟಿಕೊಂಡು ಬರಲಾಗಿ, ಸುಮಾರು 18-19ನೇ ಶತಮಾನಗಳ ನಂತರ ಈ ತೊರೆಯರೆಂಬ ಹೆಸರು ಕ್ರಮೇಣ ಮರೆಯಾಗಿ, ಉಪಪಂಗಡಗಳೇ ಸ್ವತಂತ್ರ 'ಜಾತಿ' ಗಳೆನಿಸಿ, ಎಡಗೈ-ಬಲಗೈ ನಡುವೆ ಹಂಚಿಹೋಗಿ ವಿರುದ್ಧ ದಿಕ್ಕುಗಳಲ್ಲಿ ಸಾಗುವಂತಾಯ್ತು.


ಮೈಸೂರು ಮಹಾಸಂಸ್ಥಾನದ ಮಿಲಿಟರಿಯು ಬಹುತೇಕ ಈ ತೊರೆಯರಿಂದಲೆ ಕೂಡಿದ್ದಾಗಿತ್ತು. ಅದಾಗ್ಯೂ ಒಡೆಯರ್ ವಂಶದ ಉಗಮದ ಕಥೆಗಳಲ್ಲಿ ತೊರೆಯರನ್ನು "ದುಷ್ಟರು", "ಕೀಳು ಕುಲದವರು" ಎಂದು ಮೊದಲಾಗಿ ನಕಾರಾತ್ಮಕವಾಗಿ ಚಿತ್ರಿಸಿಕೊಂಡು ಬಂದಿರುವುದು ಒಂದು ಉದ್ದೇಶಪೂರ್ವಕ ರಾಜಕೀಯ ತಂತ್ರಗಾರಿಕೆಯಂತೆ (Political PR) ಕಾಣಿಸುತ್ತದೆ. ಹೊಸದಾಗಿ ಅಧಿಕಾರಕ್ಕೆ ಬಂದ ಒಂದು ವರ್ಗವು ತನ್ನ ಆಳ್ವಿಕೆಗೆ ಜನರಿಂದ ನೈತಿಕ ಬೆಂಬಲವನ್ನು ಪಡೆಯಲು, ಆ ಭೂಮಿಯ ಮೂಲನಿವಾಸಿಗಳನ್ನು ಅಥವಾ ಪ್ರಬಲ ಸ್ಥಳೀಯ ನಾಯಕರನ್ನು ‘ದುಷ್ಟರು' ಎಂದು ಹಣೆಪಟ್ಟಿ ಕಟ್ಟುವುದು ಜಗತ್ತಿನಾದ್ಯಂತ ಕಂಡುಬರುವ ವಿದ್ಯಮಾನ. 


"ನಾವು ಉತ್ತರದಿಂದ ಬಂದ ಕ್ಷತ್ರಿಯರು, ದೈವೀಕ ಯದುವಂಶದವರು" ಎಂಬ ಉದಾತ್ತ ಬಿಂಬವನ್ನು (Image building) ಸೃಷ್ಟಿಸಿಕೊಳ್ಳುವ ಮೂಲಕ, ತಾವು ಸ್ಥಳೀಯರಿಗಿಂತ ಶ್ರೇಷ್ಠರೆಂದು ಸಾಬೀತುಪಡಿಸಲು ಇಲ್ಲಿ ಯತ್ನಿಸಲಾಗಿದೆ. ಈ ಕಥೆಗಳ ಮೂಲಕ ಜನರಲ್ಲಿ ಒಂದು ಬಗೆಯ 'ಭಯ-ಭಕ್ತಿ'ಯನ್ನು ಬಿತ್ತುವ ಸಂಚು ರೂಪಿಸಲಾಗಿದೆ. ತೊರೆಯರಂತಹ ಪ್ರಬಲ 'ಮಣ್ಣಿನ ಮಕ್ಕಳನ್ನು' ಸಂಹರಿಸಿದೆವು ಎಂದು ಸಾರುವ ಮೂಲಕ, ತಾವು ಈ ನೆಲದ ಅತ್ಯಂತ ಪ್ರಬಲ ಶಕ್ತಿ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. 


ತೊರೆಯರು ಮೈಸೂರು ಸೀಮೆಯ ಮೂಲನಿವಾಸಿಗಳೆಂಬುದನ್ನು ದೇವಚಂದ್ರ ಕವಿಯು ತನ್ನ ರಾಜಾವಳಿ ಕಥಾಸಾರದಲ್ಲಿ ಹೀಗೆ ಉಲ್ಲೇಖಿಸುತ್ತಾನೆ: "ಜಲಪ್ರಳಯದಲ್ಲಿ ಭೂಮಿಯು ನೀರಿನಲ್ಲಿ ಮುಳುಗಡೆಗೊಂಡು, ಜೀವಿಗಳೆಲ್ಲ ನಾಶಗೊಂಡಾಗ ಸೋರೆಬುಡರುಡೆ (ಸಂಸ್ಕೃತದಲ್ಲಿ-ಇಕ್ಷ್ವಾಕು) ಒಳಗೆ ಹೊಕ್ಕು ಬದುಕುಳಿದ ಸತಿಪತಿಯರಾದ ಶಿವ ಮತ್ತು ಪಾರ್ವತಿಯರಿಗೆ ಎಂಟು ಮಕ್ಕಳು ಹುಟ್ಟುತ್ತಾರೆ. ತೊರೆಯಲ್ಲಿ ಬಂದವರಾದ್ದರಿಂದ ಇವರಿಗೆ ತೊರೆಯರ್ ಎಂದು ಹೆಸರಾಗುತ್ತದೆ. ಈ ತೊರೆಯರಿಂದ ಜಗತ್ತಿನ ಉಳಿದೆಲ್ಲಾ ಜಾತಿಗಳು ವ್ಯುತ್ಪತ್ತಿಯಾಗುವವು.


ನಂತರ ಜಗತ್ತಿನ ಸಕಲ ವಿದ್ಯೆಗಳನ್ನು ಕಲಿತುಕೊಂಡ ಈ ತೊರೆಯರು, ದಕ್ಷಿಣ ದೇಶಕ್ಕೆ ಬಂದು ನಿಡುಗನಕೋಟೆ (ನಿಡುಗಲ್-ಚೋಳ ವಂಶ), ಸಿಂಗಪಟ್ಟಣ (ಪಿರಿಯಾಪಟ್ಟಣ-ಚಂಗಾಳ್ವ ವಂಶ) ಹಾಗೂ ಜಾಗನಕೋಟೆ (ಪೆರೂರು-ಗಂಗವಂಶ) ಸ್ಥಳಗಳಲ್ಲಿ ಸ್ವತಂತ್ರ ರಾಜ್ಯಗಳನ್ನು ಸ್ಥಾಪಿಸಿಕೊಂಡು, ಪ್ರತಿ ಗ್ರಾಮಗಳಲ್ಲಿ ಮಾರಿಗುಡಿಯನ್ನು ಸ್ಥಾಪಿಸಿ, ವರ್ಷಕ್ಕೊಮ್ಮೆ ಮಾರಿಜಾತ್ರೆ ನಡೆಯುವಂತೆ ಕಟ್ಟಳೆ ಮಾಡುತ್ತಾರೆ."


ದೇವಚಂದ್ರನ ಈ ಉಲ್ಲೇಖವು, ಒಡೆಯರ್ ಪ್ರಭುತ್ವದ narratives ಗಳಿಗೆ ವಿರುದ್ಧವಾಗಿ ತೊರೆಯರೆಂಬುದು ಒಂದು ವೃತ್ತಿಯಾಧಾರಿತ ಸೀಮಿತ "ಜಾತಿ" ಮಾತ್ರವಾಗಿರದೆ, ತಮ್ಮಲ್ಲೆ ಎಂಟು-ಪಂಗಡಗಳನ್ನುಳ್ಳ ಈ ನೆಲದ ವೈವಿಧ್ಯಮಯ ಮೂಲನಿವಾಸಿ ವಾರಸುದಾರರಾದ ಅವೈದಿಕ-ಬುಡಕಟ್ಟು ಜನರೆಂದು ತೋರಿಸಿಕೊಟ್ಟಿದೆ. ತೊರೆಯರ ಈ ಕುಲಮೂಲ ಕಥನವು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಒಂದು ಗಂಭೀರ ಚರ್ಚೆಗೆ ಆಹ್ವಾನ ನೀಡುತ್ತದೆ. 


ಈ ಜಲಪ್ರಳಯದಿಂದ ನಾಗರೀಕತೆ ಉಗಮಗೊಂಡ ಕಥೆಯು ಕೇವಲ ತೊರೆಯರಿಗೆ ಸೀಮಿತವಾಗದೆ, ಜಾಗತಿಕ ನಾಗರಿಕತೆಯ ಉಗಮದ ಕಥೆಗಳೊಂದಿಗೆ ಹಾಸುಹೊಕ್ಕಾಗಿದೆ. ಜಗತ್ತಿನಾದ್ಯಂತ ಕಂಡುಬರುವ ಜಲಪ್ರಳಯದ ಪುರಾಣಗಳಲ್ಲಿ ಸೋರೆಕಾಯಿ (ಇಕ್ಷ್ವಾಕು)ಯು ಒಂದು ಜೀವಧಾರಕ ಗರ್ಭವಾಗಿ (Vessel of Life), ಟಾಟೆಮಿಕ್ ಗುರುತಾಗಿ ಕಾಣಿಸಿಕೊಳ್ಳುತ್ತದೆ. ಚೀನಾದ ಯಿ (Yi) ಬುಡಕಟ್ಟು ಸೇರಿದಂತೆ ವಿಶ್ವದ ವಿವಿಧ ಆದಿಮ ಸಂಸ್ಕೃತಿಗಳಲ್ಲಿ ಸೋರೆಕಾಯಿಯನ್ನು ಸೃಷ್ಟಿಯ ಸಂಕೇತವೆಂದು ಹೇಗೆ ಆರಾಧಿಸಲಾಗುತ್ತದೆಯೋ, ಹಾಗೆಯೇ ತೊರೆಯರು ಕೂಡ ಈ ವಿಶಿಷ್ಟ ಪೌರಾಣಿಕ ಹಿನ್ನೆಲೆಯನ್ನು ಹಂಚಿಕೊಂಡಿರುವುದು ನಿಜಕ್ಕೂ ಅವರ ಪ್ರಾಚೀನತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಐತಿಹಾಸಿಕ ಕೊಂಡಿಯು ತೊರೆಯರನ್ನು ಕೇವಲ ಕರ್ನಾಟಕದ ಮೂಲನಿವಾಸಿಗಳನ್ನಾಗಿ ಮಾತ್ರವಲ್ಲದೆ, ಚೀನದ ಯಿ (Yi) ಬುಡಕಟ್ಟಿನಂತೆ ಇಡೀ ಮಾನವ ಕುಲದ ಉಳಿವು ಮತ್ತು ಮರುಹುಟ್ಟಿನ ಸಾಕ್ಷಿಗಳನ್ನಾಗಿ ಜಾಗತಿಕ ಇತಿಹಾಸದ ಮುಂಚೂಣಿಯಲ್ಲಿ ನಿಲ್ಲಿಸುತ್ತದೆ. 


ಈ ಹಿನ್ನೆಲೆಯಲ್ಲಿ ತೊರೆಯರ ಸಾಂಸ್ಕೃತಿಕ ವ್ಯಾಪ್ತಿಯನ್ನು ಕರ್ನಾಟಕದಾಚೆಗೆ ತಮಿಳುನಾಡಿನ ಕಾವೇರಿ-ಜಲಾನಯನ ವ್ಯಾಪ್ತಿಯಲ್ಲಿಯೂ ಗುರುತಿಸಬಹುದಾಗಿದೆ. ತಮಿಳು ನೆಲದಲ್ಲಿ ಶತಮಾನಗಳಿಂದ ನೆಲೆಸಿದ್ದರೂ ಇಂದಿಗೂ ತಮ್ಮ ಮನೆಭಾಷೆಯಾಗಿ ಕನ್ನಡವನ್ನೇ ಉಳಿಸಿಕೊಂಡಿರುವ ಇವರನ್ನು 'ಕನ್ನಡ-ತೊರೆಯರು' ಎಂದು ಕರೆಯಲಾಗುತ್ತದೆ. ಇವರು ವಾಸಿಸುವ ಪ್ರದೇಶಗಳನ್ನ 'ತೊರೆಯರ್ ಪಳ್ಳಿ' ಅಥವಾ 'ತೊರೆಯರ್ ಪಾಳ್ಯ' ಎಂಬ ಹೆಸರಿನಿಂದಲೇ ಗುರುತಿಸಲಾಗುವುದು. 


ಕೊಯಮತ್ತೂರು ಭಾಗದಲ್ಲಿ ಇವರು ಪ್ರಬಲರಾಗಿದ್ದು, ತಮಿಳುನಾಡಿನ ಪ್ರಖ್ಯಾತ ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸ್ವಾಮಿ ನಾಯ್ಕರ್ ಅವರು ಕೂಡ ಇದೇ ಸಮುದಾಯದ ಮೂಲದವರಾಗಿದ್ದಾರೆ ಎಂಬುದು ವಿಶೇಷ. ಸುಮಾರು ೩-೪ನೇ ಶತಮಾನದ ಅವಧಿಯಲ್ಲಿ ತೊರೆಯರಿಂದಲೇ ಟಿಸಿಲೊಡೆದ 'ಮುತ್ತುರಾಯರು' ಅಥವಾ 'ಮುತ್ತೊರೆಯರು' ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿ ಬೆಳೆದರು. 


ವಿ. ಕನಕಸಭಾಯ್ ಮೊದಲಾದ ಸಂಶೋಧಕರ ಪ್ರಕಾರ, ತಮಿಳು ನೆಲದ ಮೇಲೆ ಗಂಭೀರ ಪ್ರಭಾವ ಬೀರಿದ 'ಕಳಭ್ರರು' ಮೈಸೂರು ಸೀಮೆಯಿಂದ ಹೊರಟ ಇದೇ ತೊರೆಯರಾಗಿದ್ದಾರೆ. ನಂತರದ ಕಾಲದಲ್ಲಿ ಅಲ್ಲಿನ ಸಾಮಾಜಿಕ ಪರಿಸರಕ್ಕೆ ಹೊಂದುಕೊಂಡು, ಮುತ್ತುರಾಯರೆಂದಾಗಿ ನಂತರದ ದಿನಗಳಲ್ಲಿ ವೈಭವೋಪೇತ 'ಚೋಳ ಸಾಮ್ರಾಟ' ರಾಗಿ ಕೂಡ ಈ ತೊರೆಯರ್ (ಮುತ್ತುರಾಯರು) ಸಮುದಾಯದವರು ಬೆಳೆದರೆಂದು ಹೇಳಲಾಗುತ್ತದೆ. ತೊರೆಯರು->ಗಂಗರು->ಕಳಭ್ರರು->ಮುತ್ತುರಾಯರು->ಚೋಳರು ಹೀಗೆ ತೊರೆಯರ ಬೇರು ದಕ್ಷಿಣ ಭಾರತದಾದ್ಯಂತ ವಿಸ್ತಾರವಾಗಿ ಚಾಚಿಕೊಂಡಿರುವುದನ್ನು ನಾವು ಮರು-ರಚಿಸಬಹುದಾಗಿದೆ.


ಶಾಸನಗಳ ಹಿನ್ನೆಲೆಯಲ್ಲಿ ತೊರೆಯರ ಚರಿತ್ರೆ;


ಪೂರ್ವಾಗ್ರಹ ಪೀಡಿತವಲ್ಲದ ತೊರೆಯರ ನೈಜ ಇತಿಹಾಸ ತಿಳಿಯಲು ನಾವು ಶಾಸನಗಳ ಮೊರೆಹೋಗಬಹುದಾಗಿದೆ. ಶಾಸನಗಳು ದಾನ-ಧರ್ಮದ ಉದ್ಧೇಶಗಳನ್ನು ಹೊಂದಿರುವುದರಿಂದ ಅದರಲ್ಲಿ ಸಾಮಾಜಿಕ/ರಾಜಕೀಯ ಪೂರ್ವಾಗ್ರಹಗಳು ಸಂಪೂರ್ಣವಾಗಿ ಇಲ್ಲವೆಂದು ಹೇಳಲಾಗದಿದ್ದರೂ, ಇನ್ನಿತರೆ ಆಕರಗಳಿಗೆ ಹೋಲಿಸಿಕೊಂಡಲ್ಲಿ 'ಕಡಿಮೆ' ಎಂದಷ್ಟೆ ಹೇಳಬಹುದು.


(ಮುಂದುವರೆಯುವುದು)


✍️ ಪಾಳೇಗಾರ್ ದೀಪಕ್, ಮೈಸೂರು

🗓️ 01-April-2026

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ