ಶುಕ್ರವಾರ, ಮೇ 1, 2026

​"ಚಿಗುರೆಲೆ ಸೀಮೆ-ಮೈಸೂರಿನ ಅಸಲಿ ವಾರಸುದಾರರು ಯಾರು?! ಮರೆತುಹೋದ 'ತೊರೆಯರ' ಚರಿತ್ರೆ"

ಸಾಂಸ್ಕೃತಿಕ ಸಿರಿವಂತಿಕೆಯ ಮೈಸೂರು ಸೀಮೆಯ ಮೂಲನಿವಾಸಿ ಮಣ್ಣಿನ ಮಕ್ಕಳು ಯಾರು? ಹೀಗೊಂದು ಪ್ರಶ್ನೆ ಬಹಳಷ್ಟು ಜನರನ್ನು ಕಾಡದೇ ಇರದು. ಮೈಸೂರು ಸೀಮೆ ಎಂದಾಕ್ಷಣ ಹಳೆ ಮೈಸೂರು ಪ್ರಾಂತ್ಯವಲ್ಲ. ಇನ್ನೂ ಸೂಕ್ಷ್ಮವಾಗಿ ಗುರುತಿಸುವುದಾದರೆ ಕಾವೇರಿ ನದಿಯ ದಕ್ಷಿಣಕ್ಕೆ ಅದರ ಉಪನದಿಗಳಾದ ಲಕ್ಣ್ಮಣತೀರ್ಥ, ಹೇಮಾವತಿ, ಗುಂಡ್ಲ, ಕಪಿನಿ, ಎಣ್ಣೆಹೊಳೆ ಹಾಗೂ ಹೊನ್ನುಹೊಳೆ ಮೊದಲಾದ ಮಲೆನಾಡಿನಿಂದ ಇಳಿದುಬಂದು ನೆಲವನ್ನು ತೋಯ್ದು ಸಮೃದ್ಧಗೊಂಡಿರುವ 'ಚಿಗುರೆಲೆ' ನಾಡನ್ನು ಮೈಸೂರಿನ ತಿರುಳೆಂದು ಗುರುತಿಸಬಹುದು. 


ಈ ನಾಡನ್ನು ಪ್ರಾಚೀನ ಶಾಸನಗಳು “ಶ್ರೀಮದ್ ಕುಮಾರನಾಡಾದ-ತೊರೆನಾಡು" ಎಂದೇ ಗುರುತಿಸಿವೆ. ನೀವು ಮೈಸೂರು ಅರಸರ ಚರಿತ್ರೆಯನ್ನೊಮ್ಮೆ ಗಮನಿಸಿ. ಅವರು ಈ ಕಾವೇರಿ ಗಡಿಯನ್ನು ದಾಟಿಕೊಂಡು ಹೋಗಿದ್ದು ತೀರಾ ತಡವಾಗಿ. ಅಂದರೆ ಅವರ ರಕ್ತ ಸಂಬಂಧ, ಸಾಂಸ್ಕೃತಿಕ ಸಂಬಂಧಗಳನ್ನು ಬೆಸೆದ ಮೂಲ-ಬೇರುಗಳು ಅಂದು-ಇಂದು ಹರಡಿಕೊಂಡಿರುವುದು ಈ "ತಿರುಳು" ಸೀಮೆಯಲ್ಲಿಯೇ.


ಈ ತೊರೆನಾಡಿನ ಮೂಲನಿವಾಸಿಗಳನ್ನು ತೊರೆಯರೆಂಬುದಾಗಿ ಕರೆಯಲಾಗುತ್ತದೆ. ಜಾನಪದೀಯವಾಗಿ ಇವರನ್ನು “ಚಿಗುರೆಲೆ-ದೊರೆ ಮಕ್ಕಳು" ಎಂತಲೂ ಕರೆಯಲಾಗುತ್ತದೆ. ಮೈಸೂರು "ಚಿಗುರೆಲೆ ಸೀಮೆ" ಎಂದೇ ಜಗತ್ಪ್ರಸಿದ್ಧಿಯಾಗಿರುವುದು ನಮಗೆಲ್ಲಾ ತಿಳಿದಿರುವಂತದ್ದೆ. ಚಿಗುರೆಲೆ-ದೊರೆಗಳೆಂದರೆ ಮೈಸೂರಿನ ಒಡೆಯರು, ಒಡೆಯರ ಪೂರ್ವಜರಾದ ಹೊಯ್ಸಳರು, ಹೊಯ್ಸಳರ ಪೂರ್ವಜರಾದ ಗಂಗರು! ಇವರುಗಳ ಬಗ್ಗೆಯೂ ನಮಗೆಲ್ಲಾ ಪರಿಚಯ ಇರುವಂತದ್ದೆ. ಆದರೆ ಈ ಮಣ್ಣನ್ನು ಜೀರ್ಣಸಿ ಇಲ್ಲಿನ ಸೊಗಡನ್ನು ಉಸಿರಾಡಿದ ಸಾಮಾನ್ಯ ಮೂಲನಿವಾಸಿ ಜನರ ಕುರಿತಾಗಿ ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ; ಅಲ್ಪಪ್ರಮಾಣದಲ್ಲಿ ತಿಳಿದಿದ್ದರೂ misconceptions  ಹೆಚ್ಚಾಗಿದೆ.


ಈ ಮೂಲನಿವಾಸಿಗಳ ಕುರಿತಾಗಿ ಫ್ರಾನ್ಸಿಸ್ ಬುಕಾನಾನ್ (1762-1829) ತನ್ನ “A Journey from Madras through the Countries of Mysore, Canara and Malabar,1807” ಎಂಬ ಕೃತಿಯಲ್ಲಿ “ತೊರೆಯರೆಂಬುವವರು ಮೈಸೂರಿನ ದಕ್ಷಿಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಅವರು ಕರ್ನಾಟಕ ದೇಶದ ಮೂಲನಿವಾಸಿಗಳಾಗಿದ್ದಾರೆ” ಎಂದು ದಾಖಲಿಸಿರುತ್ತಾನೆ. 'ಕರ್ನಾಟಕದ ಮೂಲನಿವಾಸಿಗಳು' ಎಂದಿರುವುದನ್ನು ಮತ್ತೊಮ್ಮೆ ಓದಿ!


ಈ ತೊರೆಯರ ಕುರಿತಾಗಿ ನಮಗೆ ಸಾಕಷ್ಟು ಶಾಸನ ಮತ್ತು ಸಾಹಿತ್ಯಾಧಾರಗಳು ಲಭ್ಯ ಇವೆ. ಆದರೆ ಮೈಸೂರು ಒಡೆಯರ್ ಪ್ರಭುತ್ವದ ನೆರಳಿನಲ್ಲಿ ರಚನೆಗೊಂಡ ಆಕರಗಳಲ್ಲಿ ಮೂಲನಿವಾಸಿ-ತೊರೆಯರನ್ನು ಬೇಕಂತಲೇ ತುಚ್ಛೀಕರಿಸಿರುವುದು ಹಾಗೂ ಕಡೆಗಣಿಸಿರುವುದು ಹೆಜ್ಜೆಹೆಜ್ಜೆಗೂ ಸ್ಪಷ್ಟಗೊಳ್ಳುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸದೆ, ಯಥಾವತ್ತಾಗಿ ಪರಿಗಣಿಸಲಾಗುವುದಿಲ್ಲ. ಆದರೆ ವಸಾಹತು-ಕಾಲದ ಹಯವದನರಾವ್ ರಿಂದ ಪ್ರಾರಂಭಗೊಂಡು ಈಗಿನ ಪ್ರೊ.ನಂಜರಾಜೇ ಅರಸು ರವರೆಗೂ ತೊರೆಯರ ಚರಿತ್ರೆಯನ್ನು ಪೂರ್ವಾಗ್ರಹ ಹಿನ್ನೆಲೆಯಲ್ಲಿ ತುಚ್ಛೀಕರಿಸಿರುತ್ತಾರೆ.


ತೊರೆಯರೆಂಬುದು ಮೈಸೂರು ದೇಶದ ಒಂದು ವೈವಿಧ್ಯಮಯ ಬುಡಕಟ್ಟಾಗಿದ್ದು, ಇವರಲ್ಲಿ ಸ್ಥೂಲವಾಗಿ 'ಗೌರಿಕುಲ' ಹಾಗೂ 'ಗಂಗಾಕುಲ' ಎಂಬ  ಎರಡು endogamous ಉಪಪಂಗಡಗಳನ್ನು ಗುರುತಿಸಬಹುದಾಗಿದೆ. ಈ ಈರ್ವರು ಅಣ್ಣತಮ್ಮಂದಿರೆಂದು, ಸಾಂಪ್ರದಾಯಿಕವಾಗಿ ವೈವಾಹಿಕ ಕೊಡುಕೊಳ್ಳುವಿಕೆಗಳು ನಡೆದು ಬಂದಿರುವುದಿಲ್ಲ. ಆದರೆ ಗಡಿಮನೆ-ಕಟ್ಟೆಮನೆಗಳನ್ನು ಹಂಚಿಕೊಂಡಿದ್ದಾರೆ.


ಗೌರಿಕುಲದವರು ತಾವು ಗೌರಿ ಅಥವಾ ಪಾರ್ವತಿಯ ಮಕ್ಕಳೆಂದು, ಹನ್ನೆರಡು ಬಣ್ಣದವರೆಂದು ಕರೆದುಕೊಳ್ಳುತ್ತಾರೆ. ಇವರನ್ನು "ಪಾಳೇಗಾರರು" ಮತ್ತು "ರಾಜಪರಿವಾರದವರು" ಎಂತಲೂ ಕರೆಯಲಾಗುತ್ತದೆ. ಇವರು ಬಿಡುವಿನಲ್ಲಿ ಬಲೆ ಬೀಸಿ ತಮ್ಮ ಸುತ್ತಮುತ್ತಲ ಕುರುಚಲು ಕಾಡುಗಳಲ್ಲಿ, ತೋಟತುಡಿಕೆಗಳಲ್ಲಿ ಬೇಟೆಯನ್ನಾಡುವ "ಬೇಡ" ರಿದ್ದಾರೆ. ಜೊತೆಗೆ ಜೀವನೋಪಾಯಕ್ಕಾಗಿ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ವೀರನಗೆರೆ ಬದನೆ, ಹೊಗೆಸೊಪ್ಪು ಇವೇ ಮೊದಲಾದ ತೋಟಗಾರಿಕಾ ಕೃಷಿಯನ್ನು ಅವಲಂಬಿಸಿದ "ಒಕ್ಕಲಿಗರು" ಆಗಿದ್ದಾರೆ. 

ಹಾಗಂತ ಕಾವೇರಿ-ಎಡದಂಡೆಯ ಒಕ್ಕಲಿಗರಷ್ಟು sophisticated-ಕೃಷಿಕರು ಇವರುಗಳಾಗಿರಲಿಲ್ಲ. 


ತೊರೆಯರು ನೇಗಿಲು ಬಳಸುವುದು ಕಡಿಮೆ ಅಥವಾ ಅದರ ಬಳಕೆಗೆ ವಿಶೇಷ ಆಸಕ್ತಿ ಹೊಂದಿರಲಿಲ್ಲ ಎಂದೇ ಹೇಳಬಹುದು. ಅದಕ್ಕೆ ಇವರುಗಳ ಸಾಂಸ್ಕೃತಿಕ-ಕಾರಣ ಏನೇ ಇದ್ದರೂ, ನನಗನಿಸಿದ್ದು ಈ ತೋಟಗಾರಿಕೆ ಮಾಡುತ್ತಿದ್ದವರು ವಿಶೇಷವಾಗಿ ತೊರೆಯ-ಹೆಣ್ಣುಮಕ್ಕಳಿದ್ದರಿಂದ ನೇಗಿಲ ಬಳಕೆ ಕಡಿಮೆಯೆಂದು ಹೇಳಬಹುದು. ನೀರಿನ ಸೆಲೆಯಾಶ್ರಯಿಸಿದ ನೆಲ ನೋಡಿ ಕೈಯ್ಯಲ್ಲಿ ಕುಂಟೆ-ಹೊಡೆದು ತೋಟ ಮಾಡುವರು. ಇನ್ನೂ ಗಂಡುಗಳು ದಂಡಿನ ಊಳಿಗದಲ್ಲಿದ್ದದ್ದೆ ಹೆಚ್ಚು. ಹೊಯ್ಸಳರ ಗರುಡ-ಪಡೆಯು ತೊರೆಯರಿಂದಲೇ ಕೂಡಿದ್ದಾಗಿತ್ತು. ಅದರ ಪಳೆಯುಳಿಕೆಯನ್ನು ಇಂದಿಗೂ ತೊರೆಯರಲ್ಲಿ ಮಾತ್ರ ಗುರುತಿಸಲು ಸಾಧ್ಯವಿದೆ. 


ಈ ಗೌರಿಕುಲ-ತೊರೆಯರ ಉಪನಾಮವು ಸಾಮಾನ್ಯವಾಗಿ "ನಾಯಕ" ಎಂದಾಗಿರುತ್ತದೆ. ಕೆಲವು ಕುಟುಂಬಗಳಲ್ಲಿ 'ಶೆಟ್ಟಿ', 'ಗೌಡ', 'ಅರಸ', 'ರಾಜ' ಎಂಬ ಉಪನಾಮಗಳನ್ನು ಹೊಂದಿರುವುದನ್ನು ಕಾಣಬಹುದು. ಮುಂದುವರೆದು ಇವರು ತಾವು ಸೂರ್ಯವಂಶಿ-ಇಕ್ಷ್ವಾಕು ಕುಲದವರೆಂದು, ಅಯೋಧ್ಯ ಶ್ರೀರಾಮ ತಮ್ಮ ಸಾಂಸ್ಕೃತಿಕ ನಾಯಕನೆಂದು, ಸೂರ್ಯನಾರಾಯಣ ಅಥವಾ ಬಿಳಿಗಿರಿ ರಂಗನಾಥನು ತಮ್ಮ ಕುಲದೇವರೆಂದು ಆರಾಧಿಸುವುದಿದೆ. ಸಂಕ್ರಾಂತಿಯಂದು ಈ ದೇವರುಗಳ ಉತ್ಸವಮೂರ್ತಿಗಳೊಂದಿಗೆ ಕಾಡಿಗೆ ಬೇಟೆಗೆ ಹೋಗುತ್ತಾರೆ. ಇವರನ್ನು ವಿಶೇಷವಾಗಿ ಕಾವೇರಿಯ ಉಪನದಿಗಳಾದ ಕಪಿಲಾ, ಗುಂಡಲ (ಕೌಂಡಿನ್ಯ), ಹೊನ್ನುಹೊಳೆ (ಸುವರ್ಣಾವತಿ), ಲಕ್ಷ್ಮಣತೀರ್ಥ, ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಗುರುತಿಸಬಹುದಾಗಿದೆ. 


ಇವರಿರುವೆಡೆಗಳಲ್ಲಿ ರಾಶಿ ರಾಶಿ ವೀರಗಲ್ಲುಗಳನ್ನು, ವೀರರ ಆರಾಧನೆಯನ್ನು ಕಾಣಬಹುದಾಗಿದೆ. ಇವುಗಳು ಇವರ ಪರಂಪರೆ-ಸಂಸ್ಕೃತಿಯ ಧ್ಯೋತಕವಾಗಿವೆ. ಯುದ್ಧದೇವತೆಗಳೆನಿಸಿದ ಚಾಮುಂಡಿ, ಉರಿಕಾತಿ, ಉರಿಮಸಣಿ ಮೊದಲಾದ ಮಾರಿ-ಮಸಣಿಯರ ಸಾಂಪ್ರದಾಯಿಕ ಅರ್ಚಕರು ಹಾಗೂ ಅವುಗಳಿಗೆ ಬಲಿ ಕೊಡುವ ಅಥವಾ ಬಲಿ ಬೀಳುವ ಜನರು ಇವರೇ ಆಗಿದ್ದಾರೆ. ಯುದ್ಧ-ಪ್ರಚೋದಕ ಅಥವಾ ರಣೋತ್ಸಾಹ ಹಿನ್ನೆಲೆಯ ಮಾರಿಕುಣಿತ, ವೀರಮಕ್ಕಳ ಕುಣಿತದ ಜೊತೆಗೆ ಕತ್ತಿವರಸೆ ಹಾಗೂ ದೊಣ್ಣೆ ವರಸೆಗಳಲ್ಲಿ ಅತ್ಯಂತ ನಿಷ್ಣಾತರಿದ್ದಾರೆ.


ಜೊತೆಗೆ ಇವರಲ್ಲಿನ ಕೆಲ ಗಂಡಸರು ದೇವಾಲಯಗಳಲ್ಲಿ ಸಾಂಪ್ರಾದಾಯಿಕ ನಾದಸ್ವರ ವಾದಕರಾಗಿ, ಹೆಂಗಸರು ನೃತ್ಯಗಾರರಾಗಿ ಸೇವೆ ಸಲ್ಲಿಕೊಂಡು ಬಂದಿರುವುದು ಗಮನಾರ್ಹ. ಈ ನಾದಸ್ವರ ನುಡಿಸುವ ಗಂಡಸರೇ ರಾತ್ರಿ ಹೊತ್ತು ಕತ್ತಿ ಹಿಡಿದು ದೇವಾಲಯವನ್ನು ಕಾಯುವ 'ತಳವಾರ' ರಿದ್ದಾರೆ. ಇಂತಹ ಕುಟುಂಬಗಳನ್ನು ಚಾಮುಂಡಿಬೆಟ್ಟ, ಬಿಳಿಗಿರಿರಂಗನಬೆಟ್ಟ ಮೊದಲಾದೆಡೆಗಳಲ್ಲಿ ಗುರುತಿಸಬಹುದಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಬಹುತೇಕ ಆಚರಣೆ-ಕೆಲಸಗಳಲ್ಲಿ ಇವರ ಪಾಲ್ಗೊಳ್ಳುವಿಕೆ ಖಡ್ಡಾಯವಾಗಿ ಇರುತ್ತದೆ.


ತೊರೆಯರ ಮತ್ತೊಂದು ವರ್ಗವಾದ ಗಂಗಾಕುಲದವರು ಕಾವೇರಿಯ ದಂಡೆಯಲ್ಲಿ ದಟ್ಟವಾಗಿ ಕಂಡುಬರುತ್ತಾರೆ. ಇವರು ತಮ್ಮನ್ನು ಪ್ರಾಚೀನ (ತಲಕಾಡಯ) ಗಂಗವಂಶದ ಸಂತತಿಯವರೆಂದು, ತಮಗೆ ಭೀಷ್ಮನಿಂದ "ಗಾಂಗೇಯ" ಅಥವಾ "ಗಂಗಾನ್ವಯ" ಎಂಬ ಹೆಸರು ಬಂತೆಂದು, ಇನ್ನೂ ಕೆಲವರು ಜಲಪ್ರಳಯದ ನಂತರ ಮನುವು ಮೀನನ್ನು ಮದುವೆಯಾಗಿ ತಮ್ಮ ಸಂತತಿ  ಹುಟ್ಟಿದರಿಂದ ತಮಗೆ ಆ ಹೆಸರು ಬಂತೆಂದು ನಂಬುತ್ತಾರೆ. ಇವರು ನೀರಿನ ಬೇಟೆಯಲ್ಲಿ ನಿಷ್ಣಾತರಿದ್ದಾರೆ. ಹಾಗೂ ಪ್ರಾಚೀನ ದಂಡುಗಳಲ್ಲಿ ಯೋಧರಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ಕಾರ್ಯಗಳಾದ ಪಲ್ಲಕ್ಕಿ ಹೊರುವುದು, ಓಲೆಕಾರಿಕೆ, ತಳವಾರಿಕೆ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. 


ಇವರ ಉಪನಾಮವು "ಬೋಯಾ/ಬೋವ/ಬೋಯಿ" ಎಂದಿರುತ್ತದೆ. ಇವರನ್ನು ಗಂಗಾಕುಲದವರೆಂದು ಕರೆದಂತೆ, ಇವರ ರಾಜರನ್ನು ಗಂಗರಸರೆಂದು, ಇವರ ನಾಡನ್ನು ಗಂಗವಾಡಿಯೆಂದು ಕರೆದಂತೆ ತೋರುತ್ತದೆ. ಈ ಗಂಗಾಕುಲ ಬುಡಕಟ್ಟಿನ ಕುರಿತಾಗಿ ಸ್ವತಂತ್ರ ಉಲ್ಲೇಖಗಳು ಪ್ರಾಚೀನ ಶಾಸನಗಳಲ್ಲಿರುವ ಬಗ್ಗೆ ದಿವಂಗತ ಪ್ರೊ. ಎಂ.ಎಂ.ಕಲಬುರ್ಗಿಯವರು ಬರೆದಿದ್ದಾರೆ. 


ಇಷ್ಟೆಲ್ಲಾ ವೈವಿಧ್ಯಮಯ ಕಸುಬುಗಳಲ್ಲಿ  ತೊಡಗಿಸಿಕೊಂಡಿದ್ದ ಮೂಲನಿವಾಸಿ "ಬುಡಕಟ್ಟು" ಒಂದನ್ನು ಕೇವಲ 'ಬೇಟೆಗಾರರು', 'ಮೀನುಗಾರರು', 'ಸೇವಕ-ವರ್ಗ' ಅಥವಾ 'ಕೆಳಜಾತಿ-ಶೂದ್ರರು' ಎಂದು ಮುಂತಾದಂತೆ ಹಣೆಪಟ್ಟಿಗಳನ್ನು ಮೈಸೂರು ಒಡೆಯರ ಪ್ರಭುತ್ವದಡಿ ಕಾರ್ಯನಿರ್ವಹಿಸುತ್ತಿದ್ದ ತಮಿಳು-ಅಧಿಕಾರಶಾಹಿಯು ಕಟ್ಟಿಕೊಂಡು ಬರಲಾಗಿ, ಸುಮಾರು 18-19ನೇ ಶತಮಾನಗಳ ನಂತರ ಈ ತೊರೆಯರೆಂಬ ಹೆಸರು ಕ್ರಮೇಣ ಮರೆಯಾಗಿ, ಉಪಪಂಗಡಗಳೇ ಸ್ವತಂತ್ರ 'ಜಾತಿ' ಗಳೆನಿಸಿ, ಎಡಗೈ-ಬಲಗೈ ನಡುವೆ ಹಂಚಿಹೋಗಿ ವಿರುದ್ಧ ದಿಕ್ಕುಗಳಲ್ಲಿ ಸಾಗುವಂತಾಯ್ತು.


ಮೈಸೂರು ಮಹಾಸಂಸ್ಥಾನದ ಮಿಲಿಟರಿಯು ಬಹುತೇಕ ಈ ತೊರೆಯರಿಂದಲೆ ಕೂಡಿದ್ದಾಗಿತ್ತು. ಅದಾಗ್ಯೂ ಒಡೆಯರ್ ವಂಶದ ಉಗಮದ ಕಥೆಗಳಲ್ಲಿ ತೊರೆಯರನ್ನು "ದುಷ್ಟರು", "ಕೀಳು ಕುಲದವರು" ಎಂದು ಮೊದಲಾಗಿ ನಕಾರಾತ್ಮಕವಾಗಿ ಚಿತ್ರಿಸಿಕೊಂಡು ಬಂದಿರುವುದು ಒಂದು ಉದ್ದೇಶಪೂರ್ವಕ ರಾಜಕೀಯ ತಂತ್ರಗಾರಿಕೆಯಂತೆ (Political PR) ಕಾಣಿಸುತ್ತದೆ. ಹೊಸದಾಗಿ ಅಧಿಕಾರಕ್ಕೆ ಬಂದ ಒಂದು ವರ್ಗವು ತನ್ನ ಆಳ್ವಿಕೆಗೆ ಜನರಿಂದ ನೈತಿಕ ಬೆಂಬಲವನ್ನು ಪಡೆಯಲು, ಆ ಭೂಮಿಯ ಮೂಲನಿವಾಸಿಗಳನ್ನು ಅಥವಾ ಪ್ರಬಲ ಸ್ಥಳೀಯ ನಾಯಕರನ್ನು ‘ದುಷ್ಟರು' ಎಂದು ಹಣೆಪಟ್ಟಿ ಕಟ್ಟುವುದು ಜಗತ್ತಿನಾದ್ಯಂತ ಕಂಡುಬರುವ ವಿದ್ಯಮಾನ. 


"ನಾವು ಉತ್ತರದಿಂದ ಬಂದ ಕ್ಷತ್ರಿಯರು, ದೈವೀಕ ಯದುವಂಶದವರು" ಎಂಬ ಉದಾತ್ತ ಬಿಂಬವನ್ನು (Image building) ಸೃಷ್ಟಿಸಿಕೊಳ್ಳುವ ಮೂಲಕ, ತಾವು ಸ್ಥಳೀಯರಿಗಿಂತ ಶ್ರೇಷ್ಠರೆಂದು ಸಾಬೀತುಪಡಿಸಲು ಇಲ್ಲಿ ಯತ್ನಿಸಲಾಗಿದೆ. ಈ ಕಥೆಗಳ ಮೂಲಕ ಜನರಲ್ಲಿ ಒಂದು ಬಗೆಯ 'ಭಯ-ಭಕ್ತಿ'ಯನ್ನು ಬಿತ್ತುವ ಸಂಚು ರೂಪಿಸಲಾಗಿದೆ. ತೊರೆಯರಂತಹ ಪ್ರಬಲ 'ಮಣ್ಣಿನ ಮಕ್ಕಳನ್ನು' ಸಂಹರಿಸಿದೆವು ಎಂದು ಸಾರುವ ಮೂಲಕ, ತಾವು ಈ ನೆಲದ ಅತ್ಯಂತ ಪ್ರಬಲ ಶಕ್ತಿ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. 


ತೊರೆಯರು ಮೈಸೂರು ಸೀಮೆಯ ಮೂಲನಿವಾಸಿಗಳೆಂಬುದನ್ನು ದೇವಚಂದ್ರ ಕವಿಯು ತನ್ನ ರಾಜಾವಳಿ ಕಥಾಸಾರದಲ್ಲಿ ಹೀಗೆ ಉಲ್ಲೇಖಿಸುತ್ತಾನೆ: "ಜಲಪ್ರಳಯದಲ್ಲಿ ಭೂಮಿಯು ನೀರಿನಲ್ಲಿ ಮುಳುಗಡೆಗೊಂಡು, ಜೀವಿಗಳೆಲ್ಲ ನಾಶಗೊಂಡಾಗ ಸೋರೆಬುಡರುಡೆ (ಸಂಸ್ಕೃತದಲ್ಲಿ-ಇಕ್ಷ್ವಾಕು) ಒಳಗೆ ಹೊಕ್ಕು ಬದುಕುಳಿದ ಸತಿಪತಿಯರಾದ ಶಿವ ಮತ್ತು ಪಾರ್ವತಿಯರಿಗೆ ಎಂಟು ಮಕ್ಕಳು ಹುಟ್ಟುತ್ತಾರೆ. ತೊರೆಯಲ್ಲಿ ಬಂದವರಾದ್ದರಿಂದ ಇವರಿಗೆ ತೊರೆಯರ್ ಎಂದು ಹೆಸರಾಗುತ್ತದೆ. ಈ ತೊರೆಯರಿಂದ ಜಗತ್ತಿನ ಉಳಿದೆಲ್ಲಾ ಜಾತಿಗಳು ವ್ಯುತ್ಪತ್ತಿಯಾಗುವವು.


ನಂತರ ಜಗತ್ತಿನ ಸಕಲ ವಿದ್ಯೆಗಳನ್ನು ಕಲಿತುಕೊಂಡ ಈ ತೊರೆಯರು, ದಕ್ಷಿಣ ದೇಶಕ್ಕೆ ಬಂದು ನಿಡುಗನಕೋಟೆ (ನಿಡುಗಲ್-ಚೋಳ ವಂಶ), ಸಿಂಗಪಟ್ಟಣ (ಪಿರಿಯಾಪಟ್ಟಣ-ಚಂಗಾಳ್ವ ವಂಶ) ಹಾಗೂ ಜಾಗನಕೋಟೆ (ಪೆರೂರು-ಗಂಗವಂಶ) ಸ್ಥಳಗಳಲ್ಲಿ ಸ್ವತಂತ್ರ ರಾಜ್ಯಗಳನ್ನು ಸ್ಥಾಪಿಸಿಕೊಂಡು, ಪ್ರತಿ ಗ್ರಾಮಗಳಲ್ಲಿ ಮಾರಿಗುಡಿಯನ್ನು ಸ್ಥಾಪಿಸಿ, ವರ್ಷಕ್ಕೊಮ್ಮೆ ಮಾರಿಜಾತ್ರೆ ನಡೆಯುವಂತೆ ಕಟ್ಟಳೆ ಮಾಡುತ್ತಾರೆ."


ದೇವಚಂದ್ರನ ಈ ಉಲ್ಲೇಖವು, ಒಡೆಯರ್ ಪ್ರಭುತ್ವದ narratives ಗಳಿಗೆ ವಿರುದ್ಧವಾಗಿ ತೊರೆಯರೆಂಬುದು ಒಂದು ವೃತ್ತಿಯಾಧಾರಿತ ಸೀಮಿತ "ಜಾತಿ" ಮಾತ್ರವಾಗಿರದೆ, ತಮ್ಮಲ್ಲೆ ಎಂಟು-ಪಂಗಡಗಳನ್ನುಳ್ಳ ಈ ನೆಲದ ವೈವಿಧ್ಯಮಯ ಮೂಲನಿವಾಸಿ ವಾರಸುದಾರರಾದ ಅವೈದಿಕ-ಬುಡಕಟ್ಟು ಜನರೆಂದು ತೋರಿಸಿಕೊಟ್ಟಿದೆ. ತೊರೆಯರ ಈ ಕುಲಮೂಲ ಕಥನವು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಒಂದು ಗಂಭೀರ ಚರ್ಚೆಗೆ ಆಹ್ವಾನ ನೀಡುತ್ತದೆ. 


ಈ ಜಲಪ್ರಳಯದಿಂದ ನಾಗರೀಕತೆ ಉಗಮಗೊಂಡ ಕಥೆಯು ಕೇವಲ ತೊರೆಯರಿಗೆ ಸೀಮಿತವಾಗದೆ, ಜಾಗತಿಕ ನಾಗರಿಕತೆಯ ಉಗಮದ ಕಥೆಗಳೊಂದಿಗೆ ಹಾಸುಹೊಕ್ಕಾಗಿದೆ. ಜಗತ್ತಿನಾದ್ಯಂತ ಕಂಡುಬರುವ ಜಲಪ್ರಳಯದ ಪುರಾಣಗಳಲ್ಲಿ ಸೋರೆಕಾಯಿ (ಇಕ್ಷ್ವಾಕು)ಯು ಒಂದು ಜೀವಧಾರಕ ಗರ್ಭವಾಗಿ (Vessel of Life), ಟಾಟೆಮಿಕ್ ಗುರುತಾಗಿ ಕಾಣಿಸಿಕೊಳ್ಳುತ್ತದೆ. ಚೀನಾದ ಯಿ (Yi) ಬುಡಕಟ್ಟು ಸೇರಿದಂತೆ ವಿಶ್ವದ ವಿವಿಧ ಆದಿಮ ಸಂಸ್ಕೃತಿಗಳಲ್ಲಿ ಸೋರೆಕಾಯಿಯನ್ನು ಸೃಷ್ಟಿಯ ಸಂಕೇತವೆಂದು ಹೇಗೆ ಆರಾಧಿಸಲಾಗುತ್ತದೆಯೋ, ಹಾಗೆಯೇ ತೊರೆಯರು ಕೂಡ ಈ ವಿಶಿಷ್ಟ ಪೌರಾಣಿಕ ಹಿನ್ನೆಲೆಯನ್ನು ಹಂಚಿಕೊಂಡಿರುವುದು ನಿಜಕ್ಕೂ ಅವರ ಪ್ರಾಚೀನತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಐತಿಹಾಸಿಕ ಕೊಂಡಿಯು ತೊರೆಯರನ್ನು ಕೇವಲ ಕರ್ನಾಟಕದ ಮೂಲನಿವಾಸಿಗಳನ್ನಾಗಿ ಮಾತ್ರವಲ್ಲದೆ, ಚೀನದ ಯಿ (Yi) ಬುಡಕಟ್ಟಿನಂತೆ ಇಡೀ ಮಾನವ ಕುಲದ ಉಳಿವು ಮತ್ತು ಮರುಹುಟ್ಟಿನ ಸಾಕ್ಷಿಗಳನ್ನಾಗಿ ಜಾಗತಿಕ ಇತಿಹಾಸದ ಮುಂಚೂಣಿಯಲ್ಲಿ ನಿಲ್ಲಿಸುತ್ತದೆ. 


ಈ ಹಿನ್ನೆಲೆಯಲ್ಲಿ ತೊರೆಯರ ಸಾಂಸ್ಕೃತಿಕ ವ್ಯಾಪ್ತಿಯನ್ನು ಕರ್ನಾಟಕದಾಚೆಗೆ ತಮಿಳುನಾಡಿನ ಕಾವೇರಿ-ಜಲಾನಯನ ವ್ಯಾಪ್ತಿಯಲ್ಲಿಯೂ ಗುರುತಿಸಬಹುದಾಗಿದೆ. ತಮಿಳು ನೆಲದಲ್ಲಿ ಶತಮಾನಗಳಿಂದ ನೆಲೆಸಿದ್ದರೂ ಇಂದಿಗೂ ತಮ್ಮ ಮನೆಭಾಷೆಯಾಗಿ ಕನ್ನಡವನ್ನೇ ಉಳಿಸಿಕೊಂಡಿರುವ ಇವರನ್ನು 'ಕನ್ನಡ-ತೊರೆಯರು' ಎಂದು ಕರೆಯಲಾಗುತ್ತದೆ. ಇವರು ವಾಸಿಸುವ ಪ್ರದೇಶಗಳನ್ನ 'ತೊರೆಯರ್ ಪಳ್ಳಿ' ಅಥವಾ 'ತೊರೆಯರ್ ಪಾಳ್ಯ' ಎಂಬ ಹೆಸರಿನಿಂದಲೇ ಗುರುತಿಸಲಾಗುವುದು. 


ಕೊಯಮತ್ತೂರು ಭಾಗದಲ್ಲಿ ಇವರು ಪ್ರಬಲರಾಗಿದ್ದು, ತಮಿಳುನಾಡಿನ ಪ್ರಖ್ಯಾತ ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸ್ವಾಮಿ ನಾಯ್ಕರ್ ಅವರು ಕೂಡ ಇದೇ ಸಮುದಾಯದ ಮೂಲದವರಾಗಿದ್ದಾರೆ ಎಂಬುದು ವಿಶೇಷ. ಸುಮಾರು ೩-೪ನೇ ಶತಮಾನದ ಅವಧಿಯಲ್ಲಿ ತೊರೆಯರಿಂದಲೇ ಟಿಸಿಲೊಡೆದ 'ಮುತ್ತುರಾಯರು' ಅಥವಾ 'ಮುತ್ತೊರೆಯರು' ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿ ಬೆಳೆದರು. 


ವಿ. ಕನಕಸಭಾಯ್ ಮೊದಲಾದ ಸಂಶೋಧಕರ ಪ್ರಕಾರ, ತಮಿಳು ನೆಲದ ಮೇಲೆ ಗಂಭೀರ ಪ್ರಭಾವ ಬೀರಿದ 'ಕಳಭ್ರರು' ಮೈಸೂರು ಸೀಮೆಯಿಂದ ಹೊರಟ ಇದೇ ತೊರೆಯರಾಗಿದ್ದಾರೆ. ನಂತರದ ಕಾಲದಲ್ಲಿ ಅಲ್ಲಿನ ಸಾಮಾಜಿಕ ಪರಿಸರಕ್ಕೆ ಹೊಂದುಕೊಂಡು, ಮುತ್ತುರಾಯರೆಂದಾಗಿ ನಂತರದ ದಿನಗಳಲ್ಲಿ ವೈಭವೋಪೇತ 'ಚೋಳ ಸಾಮ್ರಾಟ' ರಾಗಿ ಕೂಡ ಈ ತೊರೆಯರ್ (ಮುತ್ತುರಾಯರು) ಸಮುದಾಯದವರು ಬೆಳೆದರೆಂದು ಹೇಳಲಾಗುತ್ತದೆ. ತೊರೆಯರು->ಗಂಗರು->ಕಳಭ್ರರು->ಮುತ್ತುರಾಯರು->ಚೋಳರು ಹೀಗೆ ತೊರೆಯರ ಬೇರು ದಕ್ಷಿಣ ಭಾರತದಾದ್ಯಂತ ವಿಸ್ತಾರವಾಗಿ ಚಾಚಿಕೊಂಡಿರುವುದನ್ನು ನಾವು ಮರು-ರಚಿಸಬಹುದಾಗಿದೆ.


ಶಾಸನಗಳ ಹಿನ್ನೆಲೆಯಲ್ಲಿ ತೊರೆಯರ ಚರಿತ್ರೆ;


ಪೂರ್ವಾಗ್ರಹ ಪೀಡಿತವಲ್ಲದ ತೊರೆಯರ ನೈಜ ಇತಿಹಾಸ ತಿಳಿಯಲು ನಾವು ಶಾಸನಗಳ ಮೊರೆಹೋಗಬಹುದಾಗಿದೆ. ಶಾಸನಗಳು ದಾನ-ಧರ್ಮದ ಉದ್ಧೇಶಗಳನ್ನು ಹೊಂದಿರುವುದರಿಂದ ಅದರಲ್ಲಿ ಸಾಮಾಜಿಕ/ರಾಜಕೀಯ ಪೂರ್ವಾಗ್ರಹಗಳು ಸಂಪೂರ್ಣವಾಗಿ ಇಲ್ಲವೆಂದು ಹೇಳಲಾಗದಿದ್ದರೂ, ಇನ್ನಿತರೆ ಆಕರಗಳಿಗೆ ಹೋಲಿಸಿಕೊಂಡಲ್ಲಿ 'ಕಡಿಮೆ' ಎಂದಷ್ಟೆ ಹೇಳಬಹುದು.


(ಮುಂದುವರೆಯುವುದು)


✍️ ಪಾಳೇಗಾರ್ ದೀಪಕ್, ಮೈಸೂರು

🗓️ 01-April-2026

ಬುಧವಾರ, ಏಪ್ರಿಲ್ 22, 2026

"ಹೊಯ್ಸಳರು ಮತ್ತು ಕಂಪಿಲರಾಯ: ಕರ್ನಾಟಕದ ಇತಿಹಾಸದ ದಾಯಾದಿ ಕೊಂಡಿಗಳು"

​ಕರ್ನಾಟಕದ ಇತಿಹಾಸವೆಂದರೆ ಕೇವಲ ಯುದ್ಧಗಳ ಚರಿತ್ರೆಯಲ್ಲ, ಅದು ರಕ್ತಸಂಬಂಧಿ ಪರಾಕ್ರಮಿಗಳ ಏಳುಬೀಳಿನ ಕಥೆ. ಕರ್ನಾಟಕ (ವಿಜಯನಗರ) ಸಾಮ್ರಾಜ್ಯದ ಉದಯಕ್ಕೆ ಮುನ್ನುಡಿಯಾದ ಬಲಿಷ್ಠ ಕಂಪಿಲಿ ರಾಜ್ಯ ಮತ್ತು ಹೊಯ್ಸಳರ ನಡುವಿನ ಸಂಬಂಧವು ಕೇವಲ ರಾಜಕೀಯವಾಗಿರದೆ, ಅದು ಒಂದೇ ಮೂಲದ 'ದಾಯಾದಿ' ಬಾಂಧವ್ಯವಾಗಿತ್ತು ಎಂಬುದು ಅತ್ಯಂತ ಮಹತ್ವದ ಅಂಶವಾಗಿದೆ.

ಇದಕ್ಕೆ ಪುರಾವೆಯಾಗಿ, ಇತ್ತೀಚೆಗೆ ನನ್ನ ಗಮನಕ್ಕೆ ಬಂದ ಚೆನ್ನಪ್ಪಕವಿ ವಿರಚಿತ 'ಶರಣ ಲೀಲಾಮೃತ' ಕಾವ್ಯದ ಸಾಲುಗಳು ಹೊಸ ಬೆಳಕು ಚೆಲ್ಲುತ್ತವೆ. ಚೆನ್ನಪ್ಪಕವಿಯು ಬಸವಣ್ಣನವರು ಹಾಗೂ ಅವರು ಸ್ಥಾಪಿಸಿದ ಲಿಂಗಾಯತ ಮತದ ಕಾಲಾನುಕ್ರಮಣಿಕೆಯ ಕುರಿತು ಚರ್ಚಿಸುತ್ತಾ, ಹಂಪೆ ನಗರದ ಸ್ಥಾಪನೆಯ ಬಗ್ಗೆ ವಿವರಿಸುವಾಗ ಹೀಗೆ ಹೇಳಿದ್ದಾನೆ:

"ಬಲ್ಲಾಳರೊಳಗೋರ್ವ ಬಲ್ಲಿದ ತಳವಾರ | ನಲ್ಲಿಂದ ಹೊಸಮಲೆಯಲ್ಲಿ ನಿಂತನು"

ಈ ಸಾಲಿನಲ್ಲಿರುವ 'ತಳವಾರ' ಎಂಬ ಪದವು ಅತ್ಯಂತ ಮಾರ್ಮಿಕವಾಗಿದೆ. ಚಾರಿತ್ರಿಕವಾಗಿ 'ತಳವಾರ' ಎಂದರೆ ಗ್ರಾಮ ರಕ್ಷಕ ಅಥವಾ ದಂಡನಾಯಕ; ಇದು ಬೇಡ (ನಾಯಕ) ಸಮುದಾಯದ ಪರ್ಯಾಯ ಹೆಸರಾಗಿದೆ. ಇಲ್ಲಿ "ಬಲ್ಲಾಳರಲ್ಲೇ ಒಬ್ಬನಾದ ಪರಾಕ್ರಮಿ ಬೇಡರವನು ಹೊಸಮಲೆಗೆ (ಹೊಸದುರ್ಗ/ಕಂಪಿಲಿ ಪ್ರದೇಶ) ಬಂದು ನೆಲೆಸಿದನು" ಎಂಬ ಅರ್ಥವು ಕಂಪಿಲರಾಯನ ಮೂಲವನ್ನು ಹೊಯ್ಸಳರೊಂದಿಗೆ ಸಮೀಕರಿಸುತ್ತದೆ.

ಇದಕ್ಕೆ ಪೂರಕವಾಗಿ, 'ವಿಜಯನಗರ ಪ್ರೊಗ್ರೆಸ್ ಆಫ್ ರಿಸರ್ಚ್ (೧೯೮೨-೮೮)' ನಲ್ಲಿ ಪ್ರಕಟವಾದ, ಸಂಡೂರಿನ ವೀರಗಲ್ಲು ಶಾಸನವೊಂದು (ಪು. ೨೪೦) ಬಲವಾದ ಸಾಕ್ಷಿ ನೀಡುತ್ತದೆ. ಕ್ರಿ.ಶ. ೧೩೨೩ರಲ್ಲಿ ಹೊಯ್ಸಳರಿಗೂ ಮತ್ತು ಕಂಪಿಲರಿಗೂ ನಡೆದ ಕಾಳಗದಲ್ಲಿ ಹೊಯ್ಸಳ ಸೇನಾನಿ ಬಯಿಚಬೋವನು ಮಡಿದಾಗ, ಆ ಸಂದರ್ಭವನ್ನು ಸದರಿ ಶಾಸನವು "ದಾಯಾದ ದಂಡಿನೊಳಗೆ ದಂಡಿನಬಯಿಚಯ್ಯನು" ಮರಣ ಹೊಂದಿದನೆಂದು ದಾಖಲಿಸಿದೆ. 'ದಾಯಾದ' ಎಂಬ ಶಬ್ದಪ್ರಯೋಗವೇ ಇವರ ನಡುವಿನ ರಕ್ತಸಂಬಂಧವನ್ನು ದೃಢೀಕರಿಸುತ್ತದೆ.

ಈ ಹಿನ್ನೆಲೆಯಲ್ಲಿ, ಕಂಪಿಲಿ ರಾಜ್ಯದ ಸ್ಥಾಪಕ ಮುಮ್ಮಡಿ ಸಿಂಗನಾಯಕ ಮತ್ತು ಹೊಯ್ಸಳ ಮುಮ್ಮಡಿ ಬಲ್ಲಾಳರು ಕೇವಲ ನೆರೆಹೊರೆಯ ಅರಸರಲ್ಲದೆ, ಮೂಲತಃ ಒಂದೇ ಕುಲದ ದಾಯಾದಿಗಳಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಮುಮ್ಮಡಿ ಸಿಂಗನಾಯಕರು ಮಲೆಪ್ರಾಂತ್ಯದ ಅರಸರಾಗಿದ್ದು (ಮಲೆಪ), 'ದಾಯಾದಿ ಕಲಹ'ದಿಂದಾಗಿ ರಾಜ್ಯ ತೊರೆದು ಬಂದ ಬಗ್ಗೆ 'ಪಾಂಚಳಗಂಗನ ಸಾಂಗತ್ಯ' ದಲ್ಲಿಯೂ ಉಲ್ಲೇಖವಿದೆ.

ಇತಿಹಾಸಕಾರರ ದೃಷ್ಟಿಕೋನ:

 ಬಿ.ಎ. ಸಾಲೆತೊರೆ: ತಮ್ಮ "The Wild Tribes in Indian History" ಕೃತಿಯಲ್ಲಿ ಹೊಯ್ಸಳರು ಮೂಲತಃ 'ಮಲೆಪ' ಎಂಬ ಬೇಡರ ವರ್ಗದವರೆಂಬುದನ್ನು ಶಾಸನಾಧಾರಿತವಾಗಿ ನಿರೂಪಿಸಿದ್ದಾರೆ.

ಜೆ. ಡಂಕನ್ ಎಂ. ಡೆರೆಟ್: ತಮ್ಮ "The Hoysalas: A Medieval Indian Royal Family" ಕೃತಿಯಲ್ಲಿ ಸಾಲೆತೊರೆಯವರ ವಾದವನ್ನು ಪುಷ್ಟೀಕರಿಸುತ್ತಾ, ಹೊಯ್ಸಳರ 'ಮಲೆಪ-ಬೇಡ' ಮೂಲವನ್ನು ಸ್ಪಷ್ಟಪಡಿಸಿದ್ದಾರೆ.

ಹೊಯ್ಸಳರು ಮತ್ತು ಕಂಪಿಲರು ಇಬ್ಬರೂ ಒಂದೇ ಸಮರಪ್ರಿಯ ಬುಡಕಟ್ಟು ಹಿನ್ನೆಲೆಯಿಂದ ಬಂದವರಾಗಿದ್ದರಿಂದಲೇ ಇವರ ನಡುವೆ ಅಧಿಕಾರಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕಂಪಿಲರಾಯನು ಹೊಸಮಲೆಯಲ್ಲಿ ಕಟ್ಟಿದ ಸಾಮ್ರಾಜ್ಯವು ವಾಸ್ತವವಾಗಿ ಹೊಯ್ಸಳರದ್ದೇ ಒಂದು ಸಮಾನಾಂತರ ಮತ್ತು ಶಕ್ತಿಶಾಲಿ ಕವಲಾಗಿತ್ತು. ಇಂದಿನ ಇತಿಹಾಸದಲ್ಲಿ ಇವರನ್ನು ಬೇರೆ ಬೇರೆಯಾಗಿ ನೋಡುವ ಬದಲು, ಒಂದೇ ಬುಡಕಟ್ಟಿನ ಎರಡು ಬಲಿಷ್ಠ ಬಾಹುಗಳೆಂದು ಗುರುತಿಸುವುದು ಹೆಚ್ಚು ವೈಜ್ಞಾನಿಕವಾಗಿದೆ.

ಹೊಯ್ಸಳ ಸಾಮ್ರಾಜ್ಯವು ಅಸ್ತಮಿಸಿ ಶತಮಾನಗಳೇ ಕಳೆದಿದ್ದರೂ, ಅವರ ಅಪ್ರತಿಮ 'ಗರುಡ' ಪರಂಪರೆಯು ಇಂದಿಗೂ ಬೇಡನಾಯಕ ಸಮುದಾಯದಲ್ಲಿ ಜೀವಂತವಾಗಿದೆ. ವಾಸ್ತವವಾಗಿ, ಹೊಯ್ಸಳರು ಮತ್ತು ವಿಜಯನಗರದ ಅರಸರು ಕಂಪಿಲರಾಯನಂತೆ ಮೂಲತಃ ಬೇಡನಾಯಕ ಬುಡಕಟ್ಟಿನ ಶಕ್ತಿಶಾಲಿ ಮುಖಂಡರೇ ಆಗಿದ್ದರು. ಕಾಲಕ್ರಮೇಣ ಅಧಿಕಾರ ವಿಸ್ತರಣೆ ಮತ್ತು ರಾಜಕೀಯ ಮಾನ್ಯತೆಗಾಗಿ ಅವರು ವೈದಿಕ ಸಂಪ್ರದಾಯಗಳಿಗೆ ಹೆಚ್ಚಾಗಿ ತೆರೆದುಕೊಂಡಿದ್ದರಿಂದ, ಇಂದು ಆ ರಾಜಮನೆತನಗಳ ಮೂಲ ಅಸ್ಮಿತೆ ಭಿನ್ನವಾಗಿ ತೋರುತ್ತಿರಬಹುದು.

ಆದರೂ, ಅವರ ರಕ್ಷಣೆಗೆ ನಿಲ್ಲುತ್ತಿದ್ದ ಅದೇ ಬುಡಕಟ್ಟು ನಿಷ್ಠೆಯ ಸೈನಿಕ ಪಡೆಗಳು ಮುಂದೆ ವಿಜಯನಗರದ ಅರಸರಿಗೂ, ಚಿತ್ರದುರ್ಗ, ಸುರಪುರದಂತಹ ಸ್ಥಾನಿಕ ನಾಯಕ-ಅರಸರಿಗೂ ಹಾಗೂ ಮೈಸೂರು ಒಡೆಯರಿಗೂ ಅತ್ಯಂತ ನಂಬಿಕಸ್ತವಾದ 'ಖಾಸಾ ಪಡೆ' ಯಾಗಿ ಮುಂದುವರಿದವು. ಅಂದು ತಮ್ಮ ಅರಸನಿಗಾಗಿ ಪ್ರಾಣವನ್ನೇ ಅರ್ಪಿಸುತ್ತಿದ್ದ ಆ 'ಗರುಡ' ಪರಂಪರೆಯು, ವಾಸ್ತವವಾಗಿ ಈ ಬುಡಕಟ್ಟು ನಾಯಕರಲ್ಲಿದ್ದ ರಕ್ತಗತವಾದ ಸಮುದಾಯ ನಿಷ್ಠೆಯ ಸಂಕೇತವಾಗಿದೆ.

✍️ಬರಹ: ಪಾಳೇಗಾರ್ ದೀಪಕ್, ಮೈಸೂರು

📅 ದಿನಾಂಕ: ೨೨ ಏಪ್ರಿಲ್, ೨೦೨೬

ಮಂಗಳವಾರ, ಜನವರಿ 13, 2026

ಠಾಕೂರ್ ಶ್ರೀ ವೇಗಡಾಜಿ ಭಿಲ್


ಠಾಕೂರ್ ಶ್ರೀ ವೇಗಡಾಜಿ ಭಿಲ್ ಅವರು ಗುಜರಾತ ದೇಶದ  ದ್ರೋಣ ಸಂಸ್ಥಾನದ ಅರಸರಾಗಿದ್ದರು. ಅವರು ಭೀಲ್/ಬೇಡರ ವಂಶಕ್ಕೆ ಸೇರಿದ ಕ್ಷತ್ರಿಯ ತಲ್ಪಡಾ ಕೋಲಿ ಕುಟುಂಬದಲ್ಲಿ ಜನಿಸಿದ್ದರು. ಇವರನ್ನು ಠಾಕೂರ್ ವೇಗಡಾಜಿ ಭಿಲ್, ದಾದಾ ವೇಗಡಾಜಿ ಭಿಲ್, ರಾಜಾ ವೇಗಡಾಜಿ ಭಿಲ್ ಎಂಬುದಾಗಿ ಸಹ ಕರೆಯಲಾಗುತ್ತದೆ.


ದೆಹಲಿ ಸುಲ್ತಾನರ ಕಾಲಘಟ್ಟದಲ್ಲಿ ದ್ರೋಣ ರಾಜ್ಯವು ಒಂದು ಶ್ರೀಮಂತ ಹಾಗೂ ಶಕ್ತಿಶಾಲಿ ಸಂಸ್ಥಾನವಾಗಿತ್ತು. ಇವರು ತಮ್ಮದೇ ಸ್ವಂತ ನಾಣ್ಯ ಚಲಾವಣೆ ಮಾಡುವಷ್ಟು ಸ್ವತಂತ್ರರಿದ್ದರು.


14ನೇ ಶತಮಾನದ ಅಂತ್ಯದಲ್ಲಿ ಮಹಮ್ಮದ್ ಘಜ್ನಿ ಅಧಿಕಾರಕ್ಕೆ ಬಂದು, ಹಿಂದೂಗಳನ್ನು ಬಲಾತ್ಕಾರವಾಗಿ ಮತಾಂತರಗೊಳಿಸಲು ಆರಂಭಿಸಿದನು. ಘಜನಿಯ ಸಾಮಂತ ಹಾಗೂ ಗುಜರಾತು ದೇಶದ ರಾಜ್ಯಪಾಲನಾಗಿದ್ದ ಮೊಹಮ್ಮದ್ ಬೆಗಡಾ (Abu'l Fath Nasir-ud-Din Mahmud Shah I., c.1445-1511) ಅಥವಾ ಜಾ಼ಫರ್ ಖಾನನು ೧೨-ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ ಮೇಲೆ ತನ್ನ ಸೇನೆಯೊಂದಿಗೆ ಭೀಕರ ದಾಳಿ ನಡೆಸಿದನು.


ಈ ಸಂದರ್ಭ, ಈ ಧೀರ ಬೇಡರ ದೊರೆ ಶ್ರೀ ವೇಗಡಾಜಿ ಭಿಲ್ ರವರು ತನ್ನ ಅಳಿಯ ಹಾಗೂ ಅರ್ತಿಲ ಸಂಸ್ಥಾನದ ರಜಪೂತ ದೊರೆ 'ರಾಜಾ ಹಮೀರ್ಜಿ ಗೋಹಿಲ'ರೊಂದಿಗೆ ಒಡಗೂಡಿ ಮಹಮ್ಮದ್ ಘಜ್ನಿ ಹಾಗೂ ಮಹಮ್ಮದ್ ಬೆಗಡಾರನ್ನು ಸಂಹರಿಸುವ ನಿರ್ಧಾರ ಕೈಗೊಂಡು, ಕದನಕ್ಕೆ ಇಳಿದರು. ಎರಡೂ ಪಕ್ಷಗಳ ನಡುವೆ ಭೀಕರ ಕದನವೇರ್ಪಟ್ಟಿತು. ವೇಗಡಾಜಿ ಭಿಲ್ ಮತ್ತು ಹಮೀರ್ಜಿ ಗೋಹಿಲ ಇಬ್ಬರೂ ಅತ್ಯಂತ ದಿಟ್ಟತನದಿಂದ ಹೋರಾಡುವ ಮೂಲಕ ತಮ್ಮ ವೀರತ್ವ ಹಾಗೂ ಧಾರ್ಮಿಕ ಶ್ರದ್ಧೆಯನ್ನು ಪ್ರದರ್ಶಿಸಿದರು. ಆದರೆ ಈ ಯುದ್ಧದಲ್ಲಿ ಇಬ್ಬರೂ ವೀರಮರಣವನ್ನಪ್ಪಿದ್ದರು.


ಈ ಇಬ್ಬರು ಧೀರ ಪುರುಷರ ವೀರೋಚಿತ ಸಾವು ಮಹಮ್ಮದ್ ಬೆಗಡಾನನ್ನು ಅತ್ಯಂತ ಕಾಡಿತ್ತು. ಈ ಯುದ್ಧದ ನಂತರ, ರಕ್ತಪಾತದ ಮೌಲ್ಯವನ್ನು ಅರಿತುಕೊಂಡ ಮೊಹಮ್ಮದ್ ಘಜ್ನಿ ಸೋಮನಾಥ ದೇವಾಲಯವನ್ನು ತೊರೆದನು. ಮುಂದುವರೆದು ಇವರ ಧಾರ್ಮಿಕ ಶ್ರದ್ಧೆಗೆ ಮನಸೋತ ಮೊಹಮ್ಮದ್ ಬೆಗಡಾನು ಸೋಮನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದನೆಂದು ಹೇಳಲಾಗುತ್ತದೆ. ಈಗಲೂ ಸೋಮನಾಥ ದೇವಾಲಯದ ಪಕ್ಕ ವೇಗಡಾಜಿ ಭಿಲ್ಲರ ಪುಟ್ಟ ಗುಡಿಯೊಂದು ಇದ್ದು, ದೇವಾಲಯದ ಮುಂದೆ ಹಮೀರ್ಜಿ ಗೋಹಿಲರ ಪ್ರತಿಮೆಯನ್ನು ಕಾಣಬಹುದಾಗಿದೆ.


ಹೀಗೆ ಭಾರತದಾದ್ಯಂತ ಹಲವಾರು ಬೇಡರ ದೊರೆಗಳು, ತಮ್ಮ ಪ್ರಜಾವರ್ಗದ ಮಾನ-ಸ್ವಾಭಿಮಾನಗಳ ಜೊತೆಗೆ ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ಚರಿತ್ರೆಯುದ್ಧಕ್ಕೂ ತ್ಯಾಗ-ಬಲಿದಾನಗಳನ್ನು ಮಾಡಿರುತ್ತಾರೆ. ಹೊಯ್ಸಳ ವೀರಬಲ್ಲಾಳ, ಕಂಪಿಲರಾಯ ಹಾಗೂ ರಾಮನಾಥ, ಅಳಿಯ ರಾಮರಾಯ, ಮದಕರಿನಾಯಕ, ಮುಮ್ಮಡಿ ವೆಂಕಟಪ್ಪನಾಯಕ, ನಾಲ್ವಡಿ ವೆಂಕಟಪ್ಪನಾಯಕ ಈ ಎಲ್ಲರ ಸಾಲಿಗೆ ವೇಗಡಾಜಿ ಭಿಲ್ ರವರು ಕೂಡ ಸೇರುವರಿದ್ದಾರೆ.


✍️ ಪಾಳೇಗಾರ್ ದೀಪಕ್ ಮೈಸೂರು

🗓️ 11-ಜನವರಿ-2026

"ಖಡ್ಗ ಪ್ರವೀಣ" ರಾಜಾ ಸೋಮಶೇಖರನಾಯಕ


 

ರಾಜಾ ವೀರಬಸಪ್ಪನಾಯಕರ ಮರಣದ ನಂತರ ಹರಪುರಿ ಸಂಸ್ಥಾನ ಅಥವಾ ಹರಪನಹಳ್ಳಿಯ ೧೩ನೇ ದೊರೆಯಾಗಿ ಪಟ್ಟಕ್ಕೆ ಬಂದವರು "ಖಡ್ಗ ಪ್ರವೀಣ" ನೆಂಬ ಖ್ಯಾತಿಯ ರಾಜಾ ೧ನೇ ಸೋಮಶೇಖರನಾಯಕ. ಇವರು ಕ್ರಿ.ಶ.೧೭೪೨ರಲ್ಲಿ ಅಧಿಕಾರಕ್ಕೆ ಬಂದರು. ಚಂದ್ರಗಿರಿಯಿಂದ ಆಳುತ್ತಿದ್ದ ಅರವೀಡು ರಂಗರಾಯದೇವ ಮಹಾರಾಯರಿಗೆ ಸೋಮಶೇಖರನಾಯಕರು ಬಲಗೈಯಂತಿದ್ದರು. 


ಹರಪನಹಳ್ಳಿ ನಾಯಕ ಅರಸರ ಇತಿಹಾಸದಲ್ಲಿ ಸೋಮಶೇಖರನಾಯಕರ ಹೆಸರು ಚಿರಸ್ಥಾಯಿಯಾಗಿದೆ. ಇವರು ಸಾ.1742-1766’ರವರೆಗೆ ಸುಮಾರು 24-ವರ್ಷಗಳ ಕಾಲ ಸ್ಥಿರವಾದ ಆಡಳಿತ ನೀಡಿದ್ದು, ಇವರ ಕಾಲದಲ್ಲಿ ಹರಪನಹಳ್ಳಿ ಸಂಸ್ಥಾನವು ಮಹಾಪರಿವರ್ತನೆಯ ಸ್ಥಿತ್ಯಂತರವನ್ನು ಕಂಡಿತು. ಸೋಮಶೇಖರ ನಾಯಕರ ಕಾಲ ಕೋಗಿಲೆಗೆ ವಸಂತಕಾಲದಷ್ಟು ಸುಖಮಯವಾಗಿತ್ತೆಂದು ಹೇಳಲಾಗಿದೆ. ಇವರು ಹರಪನಹಳ್ಳಿ ಅರಸರಲ್ಲಿ ಪ್ರಸಿದ್ದನೂ, ವೀರನೂ, ಶೂರನೂ ಆಗಿದ್ದು ರಾಜ್ಯವನ್ನೂ ಬಹುವಾಗಿ ವಿಸ್ತರಿಸಿದರು. 


ಗುತ್ತಿಯ ಮುರಾರಿರಾಯನು ಸೋಮಶೇಖರನಾಯಕರ ಏಳಿಗೆಯನ್ನು ಸಹಿಸಲಾರದೆ ಚಿತ್ರದುರ್ಗದ ನಾಯಕರಿಂದ ಸೋಮಶೇಖರನಾಯಕರಿಗೆ ವಿರೋಧ ಉಂಟಾದ ಸಮಯವನ್ನು ಅರಿತು 'ಕೊಟ್ಟೂರು' ಗ್ರಾಮಕ್ಕೆ ಮುತ್ತಿಗೆ ಹಾಕಿದನು. ಈ ಮುರಾರಿರಾಯನು ಸಿದ್ದೋಜಿಯ ಮಗನಾಗಿದ್ದರಿಂದ ಸಿದ್ದೋಜಿ ಮುರಾರಿರಾಯನೆಂತಲೂ ಕರೆಯಲಾಗಿದೆ. 


ಸೋಮಶೇಖರ ನಾಯಕರು ವಂಶವಳ್ಳಿ, ಚಿತ್ರದಹಳ್ಳಿ, ಸಾದರದಿನ್ನೆಗಳಲ್ಲಿ ಸೇನಾವ್ಯೂಹ ರಚಿಸಿ ಯುದ್ಧಕ್ಕೆ ಸನ್ನದ್ಧನಾದರು. ನಾಯಕರ ಪಟ್ಟದರಾಣಿ ಸೋಮಮ್ಮಾಜಿಯು ಕೊಟ್ಟೂರೇಶ್ವರನ ಪ್ರಾರ್ಥನೆ ಮಾಡಿ ಪ್ರಸಾದ ಸ್ವೀಕರಿಸಿದ ನಂತರ ಯುದ್ಧಕ್ಕೆ ಹೊರಟರು. ಘೋರಯುದ್ಧ ನಡೆದು ಮುರಾರಿಗೆ ಸೋಲುಂಟಾಯಿತು. ಅವಮಾನಿತನಾದ ಮುರಾರಿಯು ದುರ್ಗದ ಹೆಬ್ಬುಲಿ ಹಿರೇಮದಕರಿ ನಾಯಕರನ್ನು ಸಹಾಯಕ್ಕೆ ಕರೆತಂದನಾದರೂ, ಸೋಮಶೇಖರನಾಯಕರ ಶೌರ್ಯದ ಮುಂದೆ ಹಿರೇಮದಕರಿ ನಾಯಕರೂ ಹಿಮ್ಮೆಟ್ಟಬೇಕಾಯಿತು.


ಮುರಾರಿರಾಯನೊಂದಿಗಿನ ವಿಜಯದ ಮಹೋತ್ಸವವನ್ನು ಹರಪನಹಳ್ಳಿ ನಾಯಕರು ತಮ್ಮ ರಾಜಧಾನಿ ಉಚ್ಚಂಗಿದುರ್ಗದಲ್ಲಿ ವಿಜಯದಶಮಿ ಹಬ್ಬದಂದು ಬನ್ನಿ ಮುಡಿಯುವ ಮೂಲಕ ಆಚರಿಸಲು ಹೊರಟರು. ಉತ್ಸವಾಂಬೆಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಅಂಗರಕ್ಷಕರೊಂದಿಗೆ ಹೊರಟಾಗ ಚಿತ್ರದುರ್ಗ ನಾಯಕರ ಕಡೆಯವರು ಪೂರ್ವ ನಿಯೋಜನೆಯಂತೆ ದಾಳಿಮಾಡಿ ಉಚ್ಚಂಗೆಮ್ಮನ ಉತ್ಸವಮೂರ್ತಿಯನ್ನು ಅಪಹರಿಸಿ ತೆಗೆದುಕೊಂಡು ಹೋಗಿ ತಮ್ಮ ದುರ್ಗದಲ್ಲಿ ಪ್ರತಿಷ್ಠಾಪಿಸಿದರು. 


ಈ ಎಲ್ಲಾ ಕಾರಣಗಳಿಂದ ಸೋಮಶೇಖರನಾಯಕರು ಚಿತ್ರದುರ್ಗದವರ ವಿರುದ್ಧ ಅನೇಕ ದಿಗ್ವಿಜಯಗಳನ್ನು ಕೈಗೊಳ್ಳುತ್ತಾರೆ. ಅವುಗಳಲ್ಲಿ ಮಾಯಕೊಂಡ, ಹಾಲಘಟ್ಟ, ಕೂಲಹಳ್ಳಿ ಯುದ್ಧಗಳು ಪ್ರಮುಖವಾಗಿದ್ದು, ಇಷ್ಟೂ ಯುದ್ಧಗಳಲ್ಲಿ ಸೋಮಶೇಖರನಾಯಕರ ಪರವಾಗಿ ಜಯವಾಗುತ್ತದೆ. ಇವರಿಗೆ ಇಕ್ಕೇರಿ/ಕೆಳದಿ/ಬಿದನೂರಿನ ನಾಯಕರು ಸದಾ ಬೆಂಬಲವಾಗಿ ನಿಂತಿದ್ದರು. ಇತಿಹಾಸದುದ್ದಕ್ಕೂ ಈ ಇಬ್ಬರಿಗೆ ಅನ್ಯೋನ್ಯತೆಯ ಸಂಬಂಧಗಳಿದ್ದ ಬಗ್ಗೆ ತಿಳಿದುಬರುತ್ತದೆ.


📚📖ಮಾಹಿತಿ ಮೂಲ: "ಹರಪನಹಳ್ಳಿ ಪಾಳೆಯಗಾರರು; ಒಂದು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ" ಸಂಶೋಧನಾ ಪ್ರಬಂಧ, ಜೆಕೆ ಮಲ್ಲಿಕಾರ್ಜುನಪ್ಪ, ಶಾಸನಶಾಸ್ತ್ರ ವಿಭಾಗ, ಕನ್ನಡ ವಿವಿ, ಹಂಪಿ, 2016.


📷ಚಿತ್ರಕೃಪೆ: ಪ್ರಹ್ಲಾದ ಕೆ. ಪಾಳೇಗಾರ್, ಹರಪನಹಳ್ಳಿ ಪಾಳೇಗಾರರ ಸಂತತಿಯವರು, ಉಚ್ಛಂಗಿದುರ್ಗ.


(✍️ ಸಂಗ್ರಹ: Palegar Deepak Mysuru, 12-ಜನವರಿ-2026)