ಬುಧವಾರ, ಏಪ್ರಿಲ್ 22, 2026

"ಹೊಯ್ಸಳರು ಮತ್ತು ಕಂಪಿಲರಾಯ: ಕರ್ನಾಟಕದ ಇತಿಹಾಸದ ದಾಯಾದಿ ಕೊಂಡಿಗಳು"

​ಕರ್ನಾಟಕದ ಇತಿಹಾಸವೆಂದರೆ ಕೇವಲ ಯುದ್ಧಗಳ ಚರಿತ್ರೆಯಲ್ಲ, ಅದು ರಕ್ತಸಂಬಂಧಿ ಪರಾಕ್ರಮಿಗಳ ಏಳುಬೀಳಿನ ಕಥೆ. ಕರ್ನಾಟಕ (ವಿಜಯನಗರ) ಸಾಮ್ರಾಜ್ಯದ ಉದಯಕ್ಕೆ ಮುನ್ನುಡಿಯಾದ ಬಲಿಷ್ಠ ಕಂಪಿಲಿ ರಾಜ್ಯ ಮತ್ತು ಹೊಯ್ಸಳರ ನಡುವಿನ ಸಂಬಂಧವು ಕೇವಲ ರಾಜಕೀಯವಾಗಿರದೆ, ಅದು ಒಂದೇ ಮೂಲದ 'ದಾಯಾದಿ' ಬಾಂಧವ್ಯವಾಗಿತ್ತು ಎಂಬುದು ಅತ್ಯಂತ ಮಹತ್ವದ ಅಂಶವಾಗಿದೆ.

ಇದಕ್ಕೆ ಪುರಾವೆಯಾಗಿ, ಇತ್ತೀಚೆಗೆ ನನ್ನ ಗಮನಕ್ಕೆ ಬಂದ ಚೆನ್ನಪ್ಪಕವಿ ವಿರಚಿತ 'ಶರಣ ಲೀಲಾಮೃತ' ಕಾವ್ಯದ ಸಾಲುಗಳು ಹೊಸ ಬೆಳಕು ಚೆಲ್ಲುತ್ತವೆ. ಚೆನ್ನಪ್ಪಕವಿಯು ಬಸವಣ್ಣನವರು ಹಾಗೂ ಅವರು ಸ್ಥಾಪಿಸಿದ ಲಿಂಗಾಯತ ಮತದ ಕಾಲಾನುಕ್ರಮಣಿಕೆಯ ಕುರಿತು ಚರ್ಚಿಸುತ್ತಾ, ಹಂಪೆ ನಗರದ ಸ್ಥಾಪನೆಯ ಬಗ್ಗೆ ವಿವರಿಸುವಾಗ ಹೀಗೆ ಹೇಳಿದ್ದಾನೆ:

"ಬಲ್ಲಾಳರೊಳಗೋರ್ವ ಬಲ್ಲಿದ ತಳವಾರ | ನಲ್ಲಿಂದ ಹೊಸಮಲೆಯಲ್ಲಿ ನಿಂತನು"

ಈ ಸಾಲಿನಲ್ಲಿರುವ 'ತಳವಾರ' ಎಂಬ ಪದವು ಅತ್ಯಂತ ಮಾರ್ಮಿಕವಾಗಿದೆ. ಚಾರಿತ್ರಿಕವಾಗಿ 'ತಳವಾರ' ಎಂದರೆ ಗ್ರಾಮ ರಕ್ಷಕ ಅಥವಾ ದಂಡನಾಯಕ; ಇದು ಬೇಡ (ನಾಯಕ) ಸಮುದಾಯದ ಪರ್ಯಾಯ ಹೆಸರಾಗಿದೆ. ಇಲ್ಲಿ "ಬಲ್ಲಾಳರಲ್ಲೇ ಒಬ್ಬನಾದ ಪರಾಕ್ರಮಿ ಬೇಡರವನು ಹೊಸಮಲೆಗೆ (ಹೊಸದುರ್ಗ/ಕಂಪಿಲಿ ಪ್ರದೇಶ) ಬಂದು ನೆಲೆಸಿದನು" ಎಂಬ ಅರ್ಥವು ಕಂಪಿಲರಾಯನ ಮೂಲವನ್ನು ಹೊಯ್ಸಳರೊಂದಿಗೆ ಸಮೀಕರಿಸುತ್ತದೆ.

ಇದಕ್ಕೆ ಪೂರಕವಾಗಿ, 'ವಿಜಯನಗರ ಪ್ರೊಗ್ರೆಸ್ ಆಫ್ ರಿಸರ್ಚ್ (೧೯೮೨-೮೮)' ನಲ್ಲಿ ಪ್ರಕಟವಾದ, ಸಂಡೂರಿನ ವೀರಗಲ್ಲು ಶಾಸನವೊಂದು (ಪು. ೨೪೦) ಬಲವಾದ ಸಾಕ್ಷಿ ನೀಡುತ್ತದೆ. ಕ್ರಿ.ಶ. ೧೩೨೩ರಲ್ಲಿ ಹೊಯ್ಸಳರಿಗೂ ಮತ್ತು ಕಂಪಿಲರಿಗೂ ನಡೆದ ಕಾಳಗದಲ್ಲಿ ಹೊಯ್ಸಳ ಸೇನಾನಿ ಬಯಿಚಬೋವನು ಮಡಿದಾಗ, ಆ ಸಂದರ್ಭವನ್ನು ಸದರಿ ಶಾಸನವು "ದಾಯಾದ ದಂಡಿನೊಳಗೆ ದಂಡಿನಬಯಿಚಯ್ಯನು" ಮರಣ ಹೊಂದಿದನೆಂದು ದಾಖಲಿಸಿದೆ. 'ದಾಯಾದ' ಎಂಬ ಶಬ್ದಪ್ರಯೋಗವೇ ಇವರ ನಡುವಿನ ರಕ್ತಸಂಬಂಧವನ್ನು ದೃಢೀಕರಿಸುತ್ತದೆ.

ಈ ಹಿನ್ನೆಲೆಯಲ್ಲಿ, ಕಂಪಿಲಿ ರಾಜ್ಯದ ಸ್ಥಾಪಕ ಮುಮ್ಮಡಿ ಸಿಂಗನಾಯಕ ಮತ್ತು ಹೊಯ್ಸಳ ಮುಮ್ಮಡಿ ಬಲ್ಲಾಳರು ಕೇವಲ ನೆರೆಹೊರೆಯ ಅರಸರಲ್ಲದೆ, ಮೂಲತಃ ಒಂದೇ ಕುಲದ ದಾಯಾದಿಗಳಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಮುಮ್ಮಡಿ ಸಿಂಗನಾಯಕರು ಮಲೆಪ್ರಾಂತ್ಯದ ಅರಸರಾಗಿದ್ದು (ಮಲೆಪ), 'ದಾಯಾದಿ ಕಲಹ'ದಿಂದಾಗಿ ರಾಜ್ಯ ತೊರೆದು ಬಂದ ಬಗ್ಗೆ 'ಪಾಂಚಳಗಂಗನ ಸಾಂಗತ್ಯ' ದಲ್ಲಿಯೂ ಉಲ್ಲೇಖವಿದೆ.

ಇತಿಹಾಸಕಾರರ ದೃಷ್ಟಿಕೋನ:

 ಬಿ.ಎ. ಸಾಲೆತೊರೆ: ತಮ್ಮ "The Wild Tribes in Indian History" ಕೃತಿಯಲ್ಲಿ ಹೊಯ್ಸಳರು ಮೂಲತಃ 'ಮಲೆಪ' ಎಂಬ ಬೇಡರ ವರ್ಗದವರೆಂಬುದನ್ನು ಶಾಸನಾಧಾರಿತವಾಗಿ ನಿರೂಪಿಸಿದ್ದಾರೆ.

ಜೆ. ಡಂಕನ್ ಎಂ. ಡೆರೆಟ್: ತಮ್ಮ "The Hoysalas: A Medieval Indian Royal Family" ಕೃತಿಯಲ್ಲಿ ಸಾಲೆತೊರೆಯವರ ವಾದವನ್ನು ಪುಷ್ಟೀಕರಿಸುತ್ತಾ, ಹೊಯ್ಸಳರ 'ಮಲೆಪ-ಬೇಡ' ಮೂಲವನ್ನು ಸ್ಪಷ್ಟಪಡಿಸಿದ್ದಾರೆ.

ಹೊಯ್ಸಳರು ಮತ್ತು ಕಂಪಿಲರು ಇಬ್ಬರೂ ಒಂದೇ ಸಮರಪ್ರಿಯ ಬುಡಕಟ್ಟು ಹಿನ್ನೆಲೆಯಿಂದ ಬಂದವರಾಗಿದ್ದರಿಂದಲೇ ಇವರ ನಡುವೆ ಅಧಿಕಾರಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕಂಪಿಲರಾಯನು ಹೊಸಮಲೆಯಲ್ಲಿ ಕಟ್ಟಿದ ಸಾಮ್ರಾಜ್ಯವು ವಾಸ್ತವವಾಗಿ ಹೊಯ್ಸಳರದ್ದೇ ಒಂದು ಸಮಾನಾಂತರ ಮತ್ತು ಶಕ್ತಿಶಾಲಿ ಕವಲಾಗಿತ್ತು. ಇಂದಿನ ಇತಿಹಾಸದಲ್ಲಿ ಇವರನ್ನು ಬೇರೆ ಬೇರೆಯಾಗಿ ನೋಡುವ ಬದಲು, ಒಂದೇ ಬುಡಕಟ್ಟಿನ ಎರಡು ಬಲಿಷ್ಠ ಬಾಹುಗಳೆಂದು ಗುರುತಿಸುವುದು ಹೆಚ್ಚು ವೈಜ್ಞಾನಿಕವಾಗಿದೆ.

ಹೊಯ್ಸಳ ಸಾಮ್ರಾಜ್ಯವು ಅಸ್ತಮಿಸಿ ಶತಮಾನಗಳೇ ಕಳೆದಿದ್ದರೂ, ಅವರ ಅಪ್ರತಿಮ 'ಗರುಡ' ಪರಂಪರೆಯು ಇಂದಿಗೂ ಬೇಡನಾಯಕ ಸಮುದಾಯದಲ್ಲಿ ಜೀವಂತವಾಗಿದೆ. ವಾಸ್ತವವಾಗಿ, ಹೊಯ್ಸಳರು ಮತ್ತು ವಿಜಯನಗರದ ಅರಸರು ಕಂಪಿಲರಾಯನಂತೆ ಮೂಲತಃ ಬೇಡನಾಯಕ ಬುಡಕಟ್ಟಿನ ಶಕ್ತಿಶಾಲಿ ಮುಖಂಡರೇ ಆಗಿದ್ದರು. ಕಾಲಕ್ರಮೇಣ ಅಧಿಕಾರ ವಿಸ್ತರಣೆ ಮತ್ತು ರಾಜಕೀಯ ಮಾನ್ಯತೆಗಾಗಿ ಅವರು ವೈದಿಕ ಸಂಪ್ರದಾಯಗಳಿಗೆ ಹೆಚ್ಚಾಗಿ ತೆರೆದುಕೊಂಡಿದ್ದರಿಂದ, ಇಂದು ಆ ರಾಜಮನೆತನಗಳ ಮೂಲ ಅಸ್ಮಿತೆ ಭಿನ್ನವಾಗಿ ತೋರುತ್ತಿರಬಹುದು.

ಆದರೂ, ಅವರ ರಕ್ಷಣೆಗೆ ನಿಲ್ಲುತ್ತಿದ್ದ ಅದೇ ಬುಡಕಟ್ಟು ನಿಷ್ಠೆಯ ಸೈನಿಕ ಪಡೆಗಳು ಮುಂದೆ ವಿಜಯನಗರದ ಅರಸರಿಗೂ, ಚಿತ್ರದುರ್ಗ, ಸುರಪುರದಂತಹ ಸ್ಥಾನಿಕ ನಾಯಕ-ಅರಸರಿಗೂ ಹಾಗೂ ಮೈಸೂರು ಒಡೆಯರಿಗೂ ಅತ್ಯಂತ ನಂಬಿಕಸ್ತವಾದ 'ಖಾಸಾ ಪಡೆ' ಯಾಗಿ ಮುಂದುವರಿದವು. ಅಂದು ತಮ್ಮ ಅರಸನಿಗಾಗಿ ಪ್ರಾಣವನ್ನೇ ಅರ್ಪಿಸುತ್ತಿದ್ದ ಆ 'ಗರುಡ' ಪರಂಪರೆಯು, ವಾಸ್ತವವಾಗಿ ಈ ಬುಡಕಟ್ಟು ನಾಯಕರಲ್ಲಿದ್ದ ರಕ್ತಗತವಾದ ಸಮುದಾಯ ನಿಷ್ಠೆಯ ಸಂಕೇತವಾಗಿದೆ.

✍️ಬರಹ: ಪಾಳೇಗಾರ್ ದೀಪಕ್, ಮೈಸೂರು

📅 ದಿನಾಂಕ: ೨೨ ಏಪ್ರಿಲ್, ೨೦೨೬

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ